ಮುಂಬೈ, ಅ.30 (DaijiworldNews/AA): ನಟ ಟೈಗರ್ ಶ್ರಾಫ್ ಅವರ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಮುಂಬೈ ಪೊಲೀಸರ ಅಪರಾಧ ವಿಭಾಗವು, ಹರಿಯಾಣದ ಸೋನಿಪತ್ ಜಿಲ್ಲೆಯಿಂದ 12ನೇ ಆರೋಪಿ ಅಮನ್ ಎಂಬಾತನನ್ನು ಬಂಧಿಸಿದೆ. ಈತ ಈಗಾಗಲೇ ಬಂಧಿತನಾಗಿರುವ ಕುನಾಲ್ ಜಮಿನ್ಸಿಂಗ್ ಎಂಬಾತನ ಆಪ್ತನಾಗಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಕುನಾಲ್ ಜಮಿನ್ಸಿಂಗ್, ಅಪರಾಧ ಕೃತ್ಯಕ್ಕೆ ಬಳಸಲಾದ ಟರ್ಕಿ ನಿರ್ಮಿತ 'ಜಿಗಾನಾ' ಪಿಸ್ತೂಲ್ ಅನ್ನು ಪೂರೈಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಖಚಿತ ಮಾಹಿತಿ ಮೇರೆಗೆ ಹರಿಯಾಣ ಪೊಲೀಸರ ಸಹಯೋಗದೊಂದಿಗೆ ಸೋನಿಪತ್ ಜಿಲ್ಲೆಯ ಖಾರ್ಖೋಡಾ ತಹಸಿಲ್ ವ್ಯಾಪ್ತಿಯ ರೋಹ್ನಾ ಗ್ರಾಮದಿಂದ ಅಮನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನೆಂದು ಶಂಕಿಸಲಾದ ಅನಿಲ್ ಪಂಡಿತ್ ಎಂಬಾತನಿಂದ ಅಮನ್ ತನ್ನ ಬ್ಯಾಂಕ್ ಖಾತೆಗೆ ಹಣ ಪಡೆದಿದ್ದನೆಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ, ನಟನ ಮೇಲಿನ ದಾಳಿಯ ಹೊಣೆಯನ್ನು ಅನಿಲ್ ಪಂಡಿತ್ ತಾನೇ ಹೊತ್ತುಕೊಂಡಿದ್ದ. ಅಮನ್ ತನ್ನ ಬ್ಯಾಂಕ್ ಖಾತೆಗೆ ಪಂಡಿತ್ನಿಂದ ಹಣವನ್ನು ಪಡೆದಿದ್ದ. ಆ ಹಣವನ್ನು ಅವನು ಡ್ರಾ ಮಾಡಿ ಕುನಾಲ್ (ಜಮ್ಸಿಂಗ್) ಎಂಬಾತನಿಗೆ ನೀಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಣವನ್ನು ಶಸ್ತ್ರಾಸ್ತ್ರವೊಂದನ್ನು ಖರೀದಿಸಲು ಬಳಸಲಾಗಿದೆ. ನಂತರ, ಆ ಶಸ್ತ್ರಾಸ್ತ್ರವನ್ನು ಮುಂಬೈನಲ್ಲಿ ಇಬ್ಬರು ಶಂಕಿತ ಶೂಟರ್ಗಳಿಗೆ ಹಸ್ತಾಂತರಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.