ಮುಂಬೈ, ಜೂ. 02 (Daijiworld News/MB) : ಇತ್ತೀಚೆಗೆ ತನ್ನ ತಾಯಿ ಮರಣ ಹೊಂದಿದ್ದಾರೆ ಎಂದು ತಿಳಿಯದ ಮಗು ರೈಲ್ವೆ ನಿಲ್ದಾಣದಲ್ಲಿ ತಾಯಿಯ ಮೃತದೇಹದೊಂದಿಗೆ ಆಟವಾಡುತ್ತಾ ತಾಯಿಯನ್ನು ಎಬ್ಬಿಸುತ್ತಿದ್ದ ಮನಕಲಕುವ ವಿಡಿಯೋ ವೈರಲ್ ಆಗಿದ್ದು ಇದೀಗ ಆ ಮಗುವಿಗೆ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಸಹಾಯ ಹಸ್ತ ಚಾಚಿದ್ದಾರೆ.
ಶಾರುಖ್ ಖಾನ್ ತನ್ನ ಮೀರ್ ಸಂಸ್ಥೆ ಮೂಲಕ ಮಗುವನ್ನು ಅದರ ಅಜ್ಜ ಅಜ್ಜಿಯ ಬಳಿ ತಲುಪಿಸುವ ಕೆಲಸವನ್ನು ಮಾಡಿದ್ದು ಈ ಬಗ್ಗೆ ಟ್ವೀಟ್ ಮಾಡಿ, ಸಣ್ಣ ಕಂದಮ್ಮನ ಸಹಾಯಕ್ಕೆ ಬಂದವರಿಗೆ ಧನ್ಯವಾದ. ಪೋಷಕರನ್ನು ಕಳೆದುಕೊಂಡು ಬದುಕುವ ಶಕ್ತ ಒದಗಿಸಲೆಂದು ನಾವು ಪ್ರಾರ್ಥಿಸುತ್ತೇವೆ. ಅದು ಹೇಗೆ ಭಾಸವಾಗುತ್ತದೆ ಎಂದು ನನಗೆ ತಿಳಿದಿದೆ. ನಮ್ಮ ಪ್ರೀತಿ ಮತ್ತು ಬೆಂಬಲ ನಿನ್ನೊಂದಿಗೆ ಇದೆ ಮಗು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮೀರ್ ಸಂಸ್ಥೆ, ಮಗುವನ್ನು ತಲುಪಿಸಲು ಸಹಾಯ ಮಾಆಡಿದ ಎಲ್ಲರಿಗೂ ಮೀರ್ಫೌಂಡೇಶನ್ ಧನ್ಯವಾದ ಸಲ್ಲಿಸುತ್ತದೆ. ಆ ಮಗು ತನ್ನ ತಾಯಿಯನ್ನು ಎಬ್ಬಿಸುವ ಹೃದಯ ಮಿಡಿಯುವ ವಿಡಿಯೋ ಎಲ್ಲರಿಗೂ ಮನಕರಗಿಸಿದೆ. ನಾವೆಲ್ಲರೂ ಮಗುವಿಗೆ ಸಹಾಯ ಮಾಡಿದ್ದು ಮಗು ಈಗ ತನ್ನ ಅಜ್ಜನ ಆರೈಕೆಯಲ್ಲಿದ್ದಾರೆ ಎಂದು ತಿಳಿಸಿದೆ.
ಮೀರ್ ಸಂಸ್ಥೆಯನ್ನು ಶಾರುಖ್ ಖಾನ್ ನಡೆಸುತ್ತಿದ್ದು, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸಂಸ್ಥೆಯ ವತಿಯಿಂದ 25 ಸಾವಿರ ಪಿಪಿಇ ಕಿಟ್ಗಳನ್ನು ಒದಗಿಸಿದ್ದಾರೆ.