ಮಂಗಳೂರು, ಜೂ. 03 (Daijiworld News/MB) : ಮಾಜಿ ಡಾನ್ ಜಯರಾಜ್ ಕಥೆಯ ಸಿನಿಮಾದ ತಯಾರಿ ನಡೆಯುತ್ತಿರುವ ನಡುವೆಯೇ ಇದೀಗ ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಅವರ ಸಿನಿಮಾ ಬರಲಿದ್ದು ಅದರಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರಿನಲ್ಲಿ ಭೂಗತ ಲೋಕದಲ್ಲಿ ಮುತ್ತಪ್ಪ ರೈ, ಎಂಪಿ ಜಯರಾಜ್, ಆಯಿಲ್ ಕುಮಾರ್ರಂತೆ ಚಿರಪರಿಚಿತರಾಗಿರುವ ಡಾನ್ ಅಮರ್ ಆಳ್ವ ಅವರನ್ನು 1992 ರಲ್ಲಿ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು. ಜೀವನದಲ್ಲಿ 1980-90 ರ ದಶಕದಲ್ಲಿ ನಡೆದ ಘಟನಾವಳಿಗಳ ಈ ಸಿನಿಮಾಕ್ಕೆ ರಿಷಭ್ ಶೆಟ್ಟಿ ಅವರೇ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು ನಿತೇಶ್ ಇದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಡಿಟೆಕ್ಟಿವ್ ದಿವಾಕರ್ ಪಾತ್ರದ ಮೂಲದ ಬೆಲ್ ಬಾಟಮ್ ಸಿನಿಮಾದಲ್ಲಿ ಜನಮನ ಗೆದ್ದಿದ್ದ ರಿಷಭ್ ಶೆಟ್ಟಿ ಇದೀಗ ಈ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದು 2021ಕ್ಕೆ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಸದ್ಯ ರಿಷಬ್ ಶೆಟ್ಟಿ ರುದ್ರ ಪ್ರಯಾಗ, ಹರಿ ಕಥೆ ಗಿರಿಕಥೆ ಬೆಲ್ ಬಾಟಮ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಈ ಸಿನಿಮಾದ ನಿರ್ಮಾಣ ಯಾರು ಮಾಡುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.