ಬೆಂಗಳೂರು, ಜೂ 12 (DaijiworldNews/PY) : ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ತನ್ನ ಬಾಲ್ಯದ ಗೆಳೆಯ ಅರುಣ್ ಜೊತೆ ಇಂದು ಶುಭಲಗ್ನದಲ್ಲಿ ವಿವಾಹವಾಗಿದ್ದಾರೆ. ಅರುಣ್ ಹಾಗೂ ಮಯೂರಿ ಸುಮಾರು ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇಂದು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ತನ್ನ ವಿವಾಹದ ವಿಚಾರದ ಬಗ್ಗೆ ಪೋಸ್ಟ್ ಮಾಡಿರುವ ಮಯೂರಿ ಅವರು, ಯೆಸ್.ನಾನು ಮದುವೆಯಾದೆ ಎಂದು ಬರೆದು ಜೊತೆಗೆ ತಮ್ಮ ಮದುವೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅರುಣ್ ಅವರು ಐಟಿ ಉದ್ಯೋಗಿಯಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದರು. ಸದ್ಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅರುಣ್ ಹಾಗೂ ಮಯೂರಿ ಅವರು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಮಯೂರಿ ಅವರು 10 ವರ್ಷದಿಂದ ಪ್ರೀತಿಯ ಬಲೆಗೆ ಸಿಲುಕಿದ್ದರು. ಈಗ ತಮ್ಮ ಮನೆಯವರ ಮುಂದೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.
ಮಯೂರಿ ಅವರು ಮೊದಲು ಕಿರುತೆರೆಯ ಮೂಲಕ ನಟನೆಗೆ ಪ್ರವೇಶ ಮಾಡಿದ್ದು, ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು. ನಟ ಅಜಯ್ ರಾವ್ ಅವರೊಂದಿಗೆ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ಅಭಿನಯಿಸಿ ಖ್ಯಾತಿಗೆ ಪಾತ್ರರಾಗಿದ್ದರು.
ಕಿರುತೆರೆಗೆ ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಎಂಟ್ರಿ ನೀಡಿದ್ದ ಇವರು, ನಂತರ ಕೃಷ್ಣ ಲೀಲಾ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಿದರು. ನಂತರ ಇಷ್ಟಕಾಮ್ಯ, ರುಸ್ತುಂ ಸಿನಿಮಾಗಳಲ್ಲಿ ನಟಿಸಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಮೌನಂ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವು ರಾಜ್ ಪಂಡಿತ್ ಅವರು ನಿರ್ದೇಶಿಸಿದ್ದು, ಇದೇ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.