ಬೆಂಗಳೂರು, ಜೂ 17 (DaijiworldNews/PY) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅನೇಕ ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಮಾನಸಿಕ ಖಿನ್ನತೆಯ ಬಗ್ಗೆ ತಮ್ಮ ಅಭಿಪ್ರಾಯ, ಅನುಭವಗಳನ್ನು ಶೇರ್ ಮಾಡುತ್ತಿದ್ದು, ಸ್ಯಾಂಡಲ್ವುಡ್ ನಟಿ ಸಿಂಧು ಲೋಕ್ನಾಥ್ ಅವರು ಕೂಡಾ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿದ್ದಾರೆ.ಸಿನಿಮಾದಲ್ಲಿ ಮಾತ್ರ ನಾನು ನಟಿ, ನಿಮ್ಮಂತೆ ನಾನು ಕೂಡಾ ಮನುಷ್ಯಳು ಎಂದು ಇನ್ಸ್ಟಾಗ್ರಾಂನ ಪೋಸ್ಟ್ನಲ್ಲಿ ಬರೆದುಕೊಂಡಿದ್ದು, ಇದ್ದಕ್ಕಿಂದಂತೆ ಸಿಂಧು ಲೋಕ್ನಾಥ್ ಅವರು ಯಾಕೆ ಹೀಗೆ ಬರೆದುಕೊಂಡಿದ್ದಾರೆ ಎನ್ನುವ ಬಗ್ಗೆ ಅನುಮಾನ ಮೂಡಿದೆ.
ನಾನು ನಟಿ, ಅಂದರೆ ತೆರೆಯ ಮೇಲಷ್ಟೆ ನಟಿ. ತೆರೆಯ ಹಿಂದೆ ಅಲ್ಲ. ಜೀವನದಲ್ಲಿ ನಾನು ಮಾಡುವುದೆಲ್ಲವೂ ನಟನೆ ಅಲ್ಲ. ನಾನೂ ಕೂಡಾ ಎಲ್ಲರಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಭಾವನೆಗಳನ್ನು ಸುಳ್ಳು, ನಕಲಿ ಮಾಡಲು ಆಗುವುದಿಲ್ಲ. ನಾನೂ ಭಯಪಡುತ್ತೇನೆ, ಕಷ್ಟಪಡುತ್ತೇನೆ. ನೋವು ನನಗೂ ಆಗುತ್ತದೆ, ಅಳುತ್ತೇನೆ, ಸಂತೋಷ ಹಾಗೂ ನೋವನ್ನು ನಾನು ಕೂಡಾ ಸರಿ ಸಮಾನಾಗಿ ಅನುಭವಿಸುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನಾನು ಸಿನಿಮಾ ನಟಿ ಆಗಿರುವ ಕಾರಣ ನಿಮಗೆ ಸಾಮಾನ್ಯವಾದ ಮನುಷ್ಯಳು ಅಲ್ಲವೆಂದು ಕಾಣಬಹುದು. ಆದರೆ, ಆಳದಲ್ಲಿ ನಾನು ಸಾಮಾನ್ಯ ಮನುಷ್ಯಳು. ಮುಖ್ಯವಾಗಿ ನಾನು ಒಬ್ಬ ಸಾಮಾನ್ಯ ಮನುಷ್ಯಳು ಎಂದಿದ್ದಾರೆ.
2009ರಲ್ಲಿ ಬಿಡುಗಡೆಗೊಂಡ ಪರಿಚಯ ಸಿನಿಮಾದಲ್ಲಿ ಸಿಂಧು ಲೋಕ್ನಾಥ್ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಬಳಿಕ 2012ರಲ್ಲಿ ತೆರೆಕಂಡ ಲೈಫ್ ಇಷ್ಟೇನೆ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದು, ಅನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.