ಬೆಂಗಳೂರು, ಜೂ. 28 (DaijiworldNews/MB) : ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಹಾಗೂ ಟಗರು ಸಿನಿಮಾದ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ವಿವಾಹವಾಗಿದೆ ಎಂಬ ವಂದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ನಟಿ ತ್ರಿವೇಣಿ ರಾವ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ನಟಿ, ಇದೇ ತಿಂಗಳು ಚಿಕ್ಕಣ್ಣ ಅವರ ಬರ್ತ್ಡೇ ಇದ್ದು ಆ ದಿನ ನಾನು ಪೋಸ್ಟ್ ಮಾಡಿದ್ದೆ. ಆದರೆ ಇದೇ ಪೋಸ್ಟ್ ನೋಡಿ ನನಗೂ ಮತ್ತು ಚಿಕ್ಕಣ್ಣ ಅವರಿಗೂ ಮದುವೆ ಆಗಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಇದೊಂದು ಸಿನಿಮಾದಲ್ಲಿ ಬರುವ ಸನ್ನಿವೇಶವಾಗಿದ್ದು ನನಗೂ ಅವರಿಗೂ ಮದುವೆಯಾಗಿಲ್ಲ. ನಾನು ಮದುವೆಯಾಗುವಾಗ ಅಧಿಕೃತವಾಗಿ ನಿಮಗೆ ತಿಳಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ಇದೇ ಥರ ಇರಬೇಕು. ಎಲ್ಲರು ಸುರಕ್ಷಿತವಾಗಿರಿ, ಮನೆಯೊಳಗೆ ಇರಿ ಎಂದು ತಿಳಿಸಿದ್ದಾರೆ.
ಜೂನ್ 22ರಂದು ಚಿಕ್ಕಣ್ಣ ಅವರ ಜನ್ಮ ದಿನವಿದ್ದು ಅವರ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದ ತ್ರಿವೇಣಿ, ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಈ ಫೋಟೋದಲ್ಲಿ ಇಬ್ಬರು ವಿವಾಹದ ಬಟ್ಟೆ ಧರಿಸಿದ್ದರು.