ಬೆಂಗಳೂರು, ಜೂ. 29 (DaijiworldNews/MB) : ಗಾನಕೋಗಿಲೆ, ಬಹುಭಾಷಾ ಗಾಯಕಿ ಎಸ್. ಜಾನಕಿ ನಿಧನರಾಗಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಸ್ಪಷ್ಟನೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಎಸ್ ಜಾನಕಿಯವರ ನಿಧನ ಸುದ್ದಿ ಸುಳ್ಳಾಗಿದ್ದು ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್ ಜಾನಕಿಯವರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ರಾತ್ರಿಯಿಂದ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಇದೀಗ ಈ ಬಗ್ಗೆ ಎಸ್ಪಿಬಿ ಸ್ಪಷ್ಟನೆ ನೀಡಿದ್ದಾರೆ.
ಜಾನಕಿ ಅಮ್ಮನವರ ಬಗ್ಗೆ ಸುಳ್ಳು ಸುದ್ದಿ ಹರಿದಾಡಿದ್ದರಿಂದ ಹಲವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಾನು ಅವರಲ್ಲಿ ಮಾತನಾಡಿದ್ದು ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದು ಈ ರೀತಿ ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಒಳ್ಳೆಯ ವಿಚಾರಗಳಿಗಾಗಿ ಬಳಸಿ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಎಸ್ ಜಾನಕಿಯವರ ಪುತ್ರ ಕೃಷ್ಣ ಅವರು, ನನ್ನ ತಾಯಿಗೆ ಶಸ್ತ್ರ ಚಿಕಿತ್ಸೆಯಾಗಿದ್ದು ಈಗ ಆರೋಗ್ಯವಾಗಿದ್ದಾರೆ. ಇದು ಸುಳ್ಳು ಸುದ್ದಿ, ಯಾರೂ ಕೂಡಾ ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮೈಸೂರಿನ ಸಂಬಂಧಿಕರ ನಿವಾಸದಲ್ಲಿ ಎಸ್ ಜಾನಕಿಯವರು ಕಾಲುಜಾರಿ ಬಿದ್ದು ಅವರ ಸೊಂಟಕ್ಕೆ ಏಟು ಬಿದ್ದು ಮೂಳೆ ಮುರಿದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು 2016 ಮತ್ತು 2017ರಲ್ಲಿಯೂ ಕೂಡಾ ಎಸ್ ಜಾನಕಿಯವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಲಾಗಿತ್ತು. ಈ ಸಂದರ್ಭದಲ್ಲೂ ಬಾಲಸುಬ್ರಹ್ಮಣ್ಯಂ ಸೇರಿದಂತೆ ಅನೇಕ ಮಂದಿ ಸ್ಪಷ್ಟನೆ ನೀಡಿದ್ದರು.