ಹೈದರಾಬಾದ್, ಜು. 05 (DaijiworldNews/MB) : 2018ರಲ್ಲಿ ತೆಲಂಗಾಣದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಘಟನೆ ಆಧರಿಸಿ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಮರ್ಡರ್ ಎಂಬ ಸಿನಿಮಾದ ನಿರ್ಮಾಣ ಮಾಡುತ್ತಿದ್ದು ಈ ಕಾರಣದಿಂದ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲಂಗಾಣದಲ್ಲಿ ಅಮೃತಾ ವರ್ಷಿಣಿ ಹಾಗೂ ಪ್ರಣಯ್ ಕುಮಾರ್ ಎಂಬವರು ಪ್ರೀತಿಸಿ ವಿವಾಹವಾಗಿದ್ದು ಪ್ರಣಯ್ ಪರಿಶಿಷ್ಟ ಜಾತಿಯವರೆಂದು ಅಮೃತಾ ತಂದೆ ಮಾರುತಿ ರಾವ್ ಕೋಪಗೊಂಡಿದ್ದರು. ಗರ್ಭಿಣಿಯಾಗಿದ್ದ ಪತ್ನಿ ಅಮೃತಾಳನ್ನು ತಪಾಸಣೆಗೆಂದು ಪತಿ ಪ್ರಣಯ್ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು. ಬಳಿಕ ಮಾರುತಿ ರಾವ್ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಯುತ್ತಿರುವ ನಡುವೆಯೇ ಈ ವರ್ಷದ ಮಾರ್ಚ್ನಲ್ಲಿ ಮಾರುತಿ ರಾವ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ಈ ನಡುವೆ ಈ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ವರ್ಮಾ ಮುಂದಾಗಿದ್ದು ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಸಿನಿಮಾ ಮಾಡುವುದು ಸರಿಯಲ್ಲ ಎಂದು ಪ್ರಣಮ್ ತಂದೆ ಬಾಲಾಸ್ವಾಮಿಯವರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದು ಹಾಗೆಯೇ ಅನುಮತಿ ಪಡೆಯದೆಯೇ ಫೋಟೋವನ್ನು ಬಳಸಿದ್ದಾರೆ ಎಂದು ತಿಳಿಸಿದ್ದರು.
ಇದೀಗ ಬಾಲಸ್ವಾಮಿಯವರ ಮನವಿಯಂತೆ ರಾಮ್ ಗೋಪಾಲ್ ವರ್ಮಾ ಸಿನಿಮಾದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮ್ ಗೋಪಾಲ್ ವರ್ಮಾ ಅವರು ಜೂ.21 ರಂದು ಅಪ್ಪಂದಿರ ದಿನದಂದು ಈ ಸಿನಿಮಾದ ಪೋಸ್ಟರ್ನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ತಂದೆ ಮಗಳನ್ನು ಅತಿಯಾಗಿ ಪ್ರೀತಿಸಿದರ ಅಪಾಯ... ಎಂದು ಬರೆದುಕೊಂಡಿದ್ದರು.