ಬೆಂಗಳೂರು, ಆ 03 (DaijiworldNews/MS): ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೊಂಡು ಯಶಸ್ಸು ಕಾಣುತ್ತಿದೆ. ಇದೇ ಖುಷಿಯಲ್ಲಿ ಸುದೀಪ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ಹಿಂದಿಯಲ್ಲಿ ಮಾದ್ಯಮದ ನಿರೂಪಕಿ ‘ಕನ್ನಡ್’ ಎಂದು ಹೇಳಿದ ತಕ್ಷಣ ಅದು ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿದ ವಿಡಿಯೋ ವೈರಲ್ ಆಗುತ್ತಿದೆ.

ಸುದೀಪ್ ನಿರೂಪಕಿಗೆ ಹೇಳಿದ ಈ ವಿಡಿಯೋ ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬೆಂಬಲ ವ್ಯಕ್ತವಾಗಿದ್ದು ಕನ್ನಡ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಿರೂಪಕಿ ‘ಕನ್ನಡ್’ ಎಂದಾಗ ‘ಅದು ಕನ್ನಡ್ ಅಲ್ಲ ಕನ್ನಡ’ ಎಂದು ಸುದೀಪ್ ತಿದ್ದಿದ್ದಾರೆ. ಆ ನಿರೂಪಕಿ ‘ಕ್ಷಮಿಸಿ ಸರ್’ ಎಂದು ತನ್ನ ಮಾತನ್ನು ಸಮರ್ಥಿಸಿಕೊಳ್ಳಲು ಮುಂದಾದರು. ‘ನಾವು ಈಗ ತಾನೇ ಕಲಿಯುತ್ತಿದ್ದೇವೆ ಸರ್’ ಎಂದು ನಿರೂಪಕಿ ಹೇಳಿದರು. ಇದಕ್ಕೆ ಖಡಕ್ ಉತ್ತರ ಕೊಟ್ಟ ಸುದೀಪ್, ‘ಹಿಂದಿ ಎಂದಿಗೂ ಹಿಂದ್ ಆಗುವುದಿಲ್ಲ. ಅದೇ ರೀತಿ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದು ಕಿಚ್ಚ ಖಡಕ್ ಆಗಿ ಹೇಳಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.