ಮಂಗಳೂರು,ಜು.03(DaijiworldNews/AK): ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ "ಧರ್ಮದೈವ" ಸಿನಿಮಾದ ಪೋಸ್ಟರ್ ನ್ನು ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಅವರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿದರು.
ತುಳುನಾಡಿನ ಆರಾಧನೆ, ಭಕ್ತಿ ಶಕ್ತಿಯನ್ನು ಒಳಗೊಂಡ ದೈವಾರಾಧನೆಯ ಬಗ್ಗೆ ಜನರಿಗೆ ಅಪಾರ ಆಸಕ್ತಿ ನಂಬಿಕೆ ಇದೆ. ಕಾಂತಾರ ದ ಬಳಿಕ ದೈವಕ್ಕೆ ಮಹತ್ವ ನೀಡುವ ಮತ್ತು ದೈವದ ಕಾರಣಿಕವನ್ನು ಪ್ರತಿಬಿಂಬಿಸುವ "ಧರ್ಮದೈವ" ಸಿನಿಮಾ ಜುಲೈ 5ರಂದು ತೆರೆ ಕಾಣಲಿದೆ.
ತುಳುನಾಡಿನ ಕತೆ, ದೈವದ ಕತೆ, ಇದು ತುಳುವರ ನಂಬಿಕೆಯನ್ನು ಉಳಿಸಿ ಭಕ್ತಿಭಾವದ ಕತೆ. ಇದನ್ನು ಮನೆಮಂದಿ ವೀಕ್ಷಿಸ ಬಹುದಾಗಿದೆ. ಈಗಾಗಲೇ ಸಿನಿಮಾದ ಟೀಸರ್ ನೋಡಿದೆ. ಕಾಂತಾರದ ಬಳಿಕ ದೈವಭಕ್ತಿಯ ಧರ್ಮದೈವ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದು ಯುಟಿ ಖಾದರ್ ತಿಳಿಸಿದರು.
ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ ನಿತಿನ್ ರೈ ಮತ್ತು ನಿರ್ಮಾಪಕ ರಾಕೇಶ್ ಶೆಟ್ಟಿಯವರನ್ನು ಅಭಿನಂದಿಸಿ ಸಿನಿಮಾಕ್ಕೆ ಶುಭಹಾರೈಸಿ, ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ನಾರಾಯಣ ರೈ ಕುಕ್ಕುವಳ್ಳಿ, ಅರುಣ್ ಪುತ್ತೂರು, ಸುಧೀರ್ ಪೂಜಾರಿ ಕಲ್ಲಡ್ಕ, ರವಿ ಸಾಲ್ಯಾನ್, ರಾಧೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.