ಇಸ್ಲಾಮಾಬಾದ್, ಸೆ.7(DaijiworldNews/AA): ಕಾರ್ಗಿಲ್ ಯುದ್ಧ ನಡೆದ 25 ವರ್ಷದ ಬಳಿಕ ಭಾರತದೊಂದಿಗೆ ಮಾರಣಾಂತಿಕ ಸಂಘರ್ಷದಲ್ಲಿ ಪಾಕಿಸ್ತಾನ ತನ್ನ ಪಾತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ.
ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನೆಯ ಪ್ರಧಾನ ಕಚೇರಿಯಲ್ಲಿ ನಡೆದ 'ರಕ್ಷಣಾ ದಿನ' ಕಾರ್ಯಕ್ರಮದ ಭಾಷಣದಲ್ಲಿ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಪಾಕ್ ಪಾತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಸಮುದಾಯವು ಸ್ವಾತಂತ್ರ್ಯದ ಮೌಲ್ಯ ಮತ್ತು ಅದು ಬೇಡುವ ತ್ಯಾಗಗಳನ್ನು ಅರ್ಥಮಾಡಿಕೊಳ್ಳುವ ಧೈರ್ಯಶಾಲಿ ವ್ಯಕ್ತಿಗಳ ಸಮುದಾಯವಾಗಿದೆ. ಭಾರತ-ಪಾಕ್ ಮಧ್ಯೆ ನಡೆದ 1948, 1965, 1971ರ ಯುದ್ಧ, ಕಾರ್ಗಿಲ್ ಯುದ್ಧ, ಸಿಯಾಚಿನ್ ಘರ್ಷಣೆಯಲ್ಲಿ ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಬೇಕಾಗಿ ಬಂತು ಎಂದು ಅವರು ತಿಳಿಸಿದ್ದಾರೆ.
ಪಾಕ್ ಸೇನಾಧಿಕಾರಿಯೇ ಬಹಿರಂಗ ಹೇಳಿಕೆಯ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನ್ಯ ತಮ್ಮ ಪಾತ್ರವನ್ನು ಒಪ್ಪಿಕೊಂಡಂತೆ ಆಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.