ವಾಷಿಂಗ್ಟನ್, ಸೆ.9(DaijiworldNews/AK):ಭಾರತದ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಮಾಯವಾಗಿದೆ ಎಂದು ಟೆಕ್ಸಾಸ್ನಲ್ಲಿ ಇಂಡೊ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಲ್ಲದೆ, ಆರ್ಎಸ್ಎಸ್ ಭಾರತದ ಬಗ್ಗೆ ಏಕ ಪರಿಕಲ್ಪನೆ ಹೊಂದಿದೆ. ನಾವು ಬಹುವಿಧದ ವಿಚಾರಗಳ ಬಗ್ಗೆ ನಂಬಿಕೆ ಇಟ್ಟಿದ್ದೇವೆ ಎಂದ ರಾಹುಲ್, ಬಹುತೇಕ ಅಮೆರಿಕದಂತೆಯೇ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಅವಕಾಶ ಸಿಗಬೇಕೆಂದು ನಾವು ನಂಬಿದ್ದೇವೆ. ಪ್ರತಿಯೊಬ್ಬರಿಗೂ ಕನಸು ಕಾಣಲು ಅವಕಾಶ ಕೊಡಬೇಕು. ಜಾತಿ, ಭಾಷೆ, ಧರ್ಮ , ಸಂಪ್ರದಾಯ ಮತ್ತು ಇತಿಹಾಸಗಳನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬುದರ ಬಗ್ಗೆ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ಭಾರತದ ಪ್ರಧಾನಿ ಸಂವಿಧಾನದ ಮೇ ಲೆ ದಾಳಿ ನಡೆಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದ್ದು, ಚುನಾವಣೆಯಲ್ಲಿ ಅದು ಬಹಿರಂಗವಾಗಿದೆ. ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳು, ಎಲ್ಲ ಧರ್ಮಗಳು, ಸಂಪ್ರದಾಯಗಳು, ಪ್ರತಿಯೊಂದು ಜಾತಿಯನ್ನೂ ಗೌರವಿಸಬೇಕು. ಇವೆಲ್ಲವೂ ಸಂವಿಧಾನದಲ್ಲಿದೆ ಎಂದು ರಾಹುಲ್ ಹೇಳಿದ್ದಾರೆ.
ಭಾರತೀಯ ರಾಜಕಾರಣದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆಯ ಮೌಲ್ಯಗಳನ್ನು ರೂಢಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.