ಚಿಕಾಗೋ, ಸೆ.11(DaijiworldNews/AA): ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆಯನ್ನು ಇಲಿನಾಯ್ಸ್ ನ ಹಾಫ್ಮನ್ ಎಸ್ಟೇಟ್ ನಲ್ಲಿರುವ ಸೇಂಟ್ ಹಬರ್ಟ್ಸ್ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು.
ಸಭೆಯಲ್ಲಿ ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ (MKCA)ನ ಸದಸ್ಯರು ಮತ್ತು ಅತಿಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಮೊದಲ ಮತ್ತು ಎರಡನೇ ವಾಚನಗೋಷ್ಠಿಯನ್ನು ಅಸೋಸಿಯೇಶನ್ ಸದಸ್ಯರು ಓದಿದರು.
ಎಂಕೆಸಿಎ ಅಧ್ಯಕ್ಷ ಲಿಯೊನಾರ್ಡ್ ಲೋಬೊ ಸ್ವಾಗತಿಸಿ, ಮಂಗಳೂರು ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ಇತಿಹಾಸವನ್ನು ಸಭಿಕರಿಗೆ ಪರಿಚಯಿಸಿ ಸಂಸ್ಥೆಯು ನಡೆಸಿದ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಕಾರ್ಯಕಾರಿ ಸಮಿತಿಯ ಕೊಡುಗೆಗಳನ್ನು ಕೊಂಡಾಡಿದರು. MKCA ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಆಸ್ಟಿನ್ ಪ್ರಭು ಮಾತನಾಡಿ, ಸಂಸ್ಥೆಯ ಹುಟ್ಟಿನ ಕಾರಣಗಳು, ಭಾರತದಲ್ಲಿ ಈ ಮೊಂತಿ ಫೆಸ್ಟ್ ಹಬ್ಬವನ್ನು ಹೇಗೆ ಆಚರಿಸಲಾಯಿತು ಎಂಬುದನ್ನು ವಿವರಿಸಿದರು. ಬಳಿಕ ಮಕ್ಕಳು ಮತ್ತು ವಯಸ್ಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಸಿದ ಸಂಸ್ಥೆಯ ಹಾಲಿ ಕಾರ್ಯದರ್ಶಿ ಸವಿಯೋ ಪಾಯಸ್ ವಂದಿಸಿ, ಸ್ಥಳಾವಕಾಶ ನೀಡಿದ ಪ್ಯಾರಿಷ್ ಧರ್ಮಗುರು ರೆ.ಫಾ. ಟಾಮ್ ಅಬ್ರಹಾಂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಭಾಗದ ವಿವಿಧ ರೀತಿಯ ಸಾಂಪ್ರದಾಯಿಕ ಆಹಾರವನ್ನು ಸದಸ್ಯರೇ ತಯಾರಿಸಿದ್ದು ವಿಶೇಷವಾಗಿತ್ತು. ಆಹಾರ ತಯಾರಿಸಿದ ಸಂಸ್ಥೆಯ ಸದಸ್ಯರಿಗೆ ಫಾ. ಟಾಮ್ ಅಬ್ರಹಾಂ ಶುಭ ಹಾರೈಸಿದರು. ಬಳಿಕ ಎಲ್ಲರೂ ಜೊತೆಯಾಗಿ ಸಾಂಪ್ರ್ರದಾಯಿಕ ಭೋಜನ ಸೇವಿಸಿದರು. ಕ್ವೀನಿ ಮೆಂಡೋನ್ಕಾ ಅವರಿಂದ ಸಂಯೋಜಿಸಲ್ಪಟ್ಟ ಡಿಜಿಂಗ್ ನ ಕೊಂಕಣಿ, ಹಿಂದಿ ಮತ್ತು ಸ್ಪ್ಯಾನಿಷ್ ಹಾಡುಗಳ ಟ್ಯೂನ್ ಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಮೊಂತಿ ಫೆಸ್ಟ್: ಮಂಗಳೂರಿನ ಕ್ರೈಸ್ತ ಸಮುದಾಯಕ್ಕೆ ಈ ಹಬ್ಬ ವಿಶಿಷ್ಟವಾಗಿದೆ. ಈ ಹಬ್ಬವು ಯು.ಎಸ್.ಎ ಮತ್ತು ಭಾರತದಲ್ಲಿ ಕೃತಜ್ಞತೆ ಸಲ್ಲಿಸುವುದನ್ನು ಹೋಲುತ್ತದೆ, ಕೇರಳದಲ್ಲಿ ಓಣಂ, ತಮಿಳುನಾಡಿನಲ್ಲಿ ಪೊಂಗಲ್, ನಾಗ ಪಂಚಮಿ, ತೀಜ್, ರಥ ಯಾತ್ರೆ, ಹಾರ್ನ್ಬಿಲ್ ಮುಂತಾದ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ. ಮಂಗಳೂರಿಗರು ಮೂಲ ಮೇರಿ ಹಬ್ಬದ ಜನ್ಮದಿನವನ್ನಾಗಿಯೂ ಆಚರಿಸುತ್ತಾರೆ. ಕ್ರಿಶ್ಚಿಯನ್ನ ಪರಮೋಚ್ಛ ಗುರು ಯೇಸು ಕ್ರಿಸ್ತನಿಗೆ ಜನ್ಮ ನೀಡುವಲ್ಲಿ ಮತ್ತು ಋತುವಿನ ಹೊಸ ಬೆಳೆಯನ್ನು ಒದಗಿಸುವಲ್ಲಿ ತಾಯಿ ಮೇರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಹೊಸ ಬೆಳೆಯನ್ನು ಆಶೀರ್ವದಿಸಲಾಗುತ್ತದೆ ಮತ್ತು ಭಕ್ತರಿಗೆ ಹಂಚಲಾಗುತ್ತದೆ, ಭಕ್ತರು ಮನೆಗೆ ಕರೆದೊಯ್ದು ಮೇರಿ ಮಾತೆಯ ಜನ್ಮವನ್ನು ಆಚರಿಸಲು ಹೊಸ ತೆನೆಯನ್ನು ಬಳಸುತ್ತಾರೆ.