ಢಾಕಾ,ಸೆ.12(DaijiworldNews/AK): ಅಜಾನ್ ಮತ್ತು ನಮಾಜ್ ವೇಳೆ ಎಲ್ಲಾ ಮಂದಿರ ಹಾಗೂ ಪ್ರಾರ್ಥನಾ ಕೇಂದ್ರಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ ಸರ್ಕಾರ ಸೂಚಿಸಿದೆ. ನಮಾಜ್ ಹಾಗೂ ಆಜಾನ್ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹೊಸದಾಗಿ ರಚಿನೆಯಾಗಿರುವ ಮಧ್ಯಂತರ ಸರ್ಕಾರ ಹಿಂದೂ ಸಮುದಾಯಕ್ಕೆತಾತ್ಕಾಲಿಕವಾಗಿ ದುರ್ಗಾ ಪೂಜೆ ಸಂಬಂಧಿತ ಚಟುವಟಿಕೆಗಳು, ವಿಶೇಷ ಸಂಗೀತ ಕಾರ್ಯಕ್ರಮವನ್ನು ನಮಾಜ್ ಹಾಗೂ ಆಜಾನ್ ವೇಳೆ ನಿಲ್ಲಿಸುವಂತೆ ಸೂಚಿಸಿದೆ. ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನಿಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ಹಿಂದೂ ಸಮುದಾಯದ ಅತಿ ದೊಡ್ಡ ಧಾರ್ಮಿಕ ಹಬ್ಬವಾದ ದುರ್ಗಾ ಪೂಜೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಈ ಸೂಚನೆ ನಿಡಲಾಗಿದೆ.ನಮ್ಮದು ಕೋಮು ಸೌಹಾರ್ದತೆಯನ್ನು ಗೌರವಿಸುವ ರಾಷ್ಟ್ರ. ಕಾನೂನನ್ನು ಕೈಗೆತ್ತಿಕೊಂಡು ಅವ್ಯವಸ್ಥೆ ಸೃಷ್ಟಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.