ಜಿನೀವಾ, ಸೆ.14(DaijiworldNews/AA): ಜೀವನವು 'ಖಟಾ-ಖಟ್' (ಸುಲಭವಾದ ಕೆಲಸ) ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ವಿಚಾರದ ಕುರಿತು ಮಾತನಾಡಿದ ಅವರು, ನೀವು ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ನಿರ್ಮಿಸುವವರೆಗೆ ಆ ನೀತಿಗಳನ್ನು ಜಾರಿಗೆ ತರುವವರೆಗೆ ಅದು ಕಠಿಣ ಕೆಲಸ. ಒಂದು ದೇಶವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದೇ ದೊಡ್ಡ ಶಕ್ತಿಯಾಗಲು ಸಾಧ್ಯವಿಲ್ಲ. ಹಿಂದಿನ ಸರ್ಕಾರ ಉತ್ಪಾದನಾ ವಲಯವನ್ನು ನಿರ್ಲಕ್ಷಿಸಿದ ಕಾರಣ ನಾವು ಚೀನಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಕಿಡಿಕಾರಿದ್ದಾರೆ.
ಕೆಲಸವನ್ನು ಹೊಂದಿರುವ ಮತ್ತು ಅದರಲ್ಲಿ ಶ್ರಮಿಸಿದ ಯಾರಿಗಾದರೂ ಅದು ತಿಳಿದಿದೆ. ಹಾಗಾಗಿ ಇದು ನಿಮಗೆ ನನ್ನ ಸಂದೇಶವಾಗಿದೆ, ನಾವು ಶ್ರಮ ಪಡಬೇಕು. ನಾವು ಅದಕ್ಕೆ ಅಸಮರ್ಥರು, ನಾವು ಅದನ್ನು ಪ್ರಯತ್ನಿಸಬಾರದು ಎಂದು ಹೇಳುವ ಜನರಿದ್ದಾರೆ. ನೀವು ನಿಜವಾಗಿಯೂ ಉತ್ಪಾದನೆಯಿಲ್ಲದೆ ವಿಶ್ವದ ಪ್ರಮುಖ ಶಕ್ತಿಯಾಗಬಹುದೇ? ಏಕೆಂದರೆ ಒಂದು ಪ್ರಮುಖ ಶಕ್ತಿಗೆ ತಂತ್ರಜ್ಞಾನದ ಅಗತ್ಯವಿದೆ. ಯಾರೂ ಉತ್ಪಾದನೆ ಅಭಿವೃದ್ಧಿಪಡಿಸದೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.