ಕರಾಚಿ, ಅ.07(DaijiworldNews/AA): ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ತಡರಾತ್ರಿ ಭಾರೀ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ ಇಬ್ಬರು ಚೀನಾದ ನಾಗರಿಕರು ಮೃತಪಟ್ಟಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಪವರ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಇಂಜಿನಿಯರ್ಗಳ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ. ಪ್ರತ್ಯೇಕತಾವಾದಿ ಬಲೂಚಿಸ್ತಾನ್ ರಾಷ್ಟ್ರೀಯ ಸೇನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ.
ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಲಾಗಿದೆ ಎಂಬ ಸಂಶಯವನ್ನು ಸಿಂಧ್ ಪ್ರಾಂತೀಯ ಗೃಹ ಸಚಿವ ಜಿಯಾ ಉಲ್ ಹಸನ್ ಲಾಂಜಾರ್ ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿದೇಶಿಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹಲವು ಪ್ರದೇಶಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿತ್ತು. ಅಪಘಾತದ ಸ್ಥಳದಲ್ಲಿ ಭಾರೀ ಸೇನಾಪಡೆ ನಿಯೋಜಿಸಲಾಗಿದೆ. ಇನ್ನು ಸ್ಫೋಟದಲ್ಲಿ ಗಾಯಗೊಂಡ ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿನ್ನಾ ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.