ಇಂಡೋನೇಷ್ಯಾ,ಅ.09(DaijiworldNews/TA):ಅಮೇರಿಕನ್ ಮಹಿಳೆಯೊಬ್ಬರು ಡೈವಿಂಗ್ ಪ್ರವಾಸದಲ್ಲಿದ್ದ ಸಮಯದಲ್ಲಿ ಭೀಕರ ತೆರೆಗೆ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ನಡೆದಿದ್ದು, ಇದೀಗ ಮಹಿಳೆಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ ಎಂದು ಮಹಿಳೆಯ ಸ್ನೇಹಿತರೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಸೆಪ್ಟೆಂಬರ್ 26ರಂದು 68 ವರ್ಷದ ಅಮೆರಿಕದ ಮಹಿಳೆ ಕೊಲೀನ್ ಮೊನ್ಫೋರ್ ತನ್ನ ಸ್ನೇಹಿತರೊಂದಿಗೆ ಇಂಡೋನೇಷ್ಯಾದ ಬೀಚ್ಗೆ ಹೋಗಿದ್ದರು ಎನ್ನಲಾಗಿದೆ. ಜೋರಾದ ಅಲೆಗಳ ರಭಸಕ್ಕೆ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಾನ್ಫೋರ್ ನಾಪತ್ತೆಯಾದಾಗ, ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ತಂಡ ಮಹಿಳೆಗಾಗಿ ಹುಡುಕಾಟ ಆರಂಭಿಸಿದೆ. ನಾಪತ್ತೆಯಾಗಿ ಒಂದು ವಾರ ಕಳೆದಿದ್ದು ಅಂತಿಮವಾಗಿ ಶಾರ್ಕ್ ಹೊಟ್ಟೆಯಲ್ಲಿ ಅವಳ ಅವಶೇಷಗಳು ಪತ್ತೆಯಾಗಿದೆ. ಈ ವಿಚಾರ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಬೆಚ್ಚಿ ಬೀಳಿಸಿದೆ.
ಟಿಮೋರ್-ಲೆಸ್ಟೆಯಲ್ಲಿ ಮೀನುಗಾರರ ಬಲೆಗೆ ಬೃಹತ್ ಶಾರ್ಕ್ ಸಿಕ್ಕಿಬಿದ್ದಿದೆ. ಬಲೆಗೆ ಬಿದ್ದ ಶಾರ್ಕ್ನ ಹೊಟ್ಟೆಯೊಳಗೆ ಮಾನವ ಅವಶೇಷಗಳು ಕಂಡುಬಂದಿತ್ತು. ಇದಲ್ಲದೇ ಈಜುಡುಗೆ ಕೂಡ ಇರುವುದು ಗಮನಕ್ಕೆ ಬಂದಿದೆ. ಡೈವಿಂಗ್ ಮಾಡುವಾಗ ಕೊಲೀನ್ ಮೊನ್ಫೋರ್ ಧರಿಸಿದ ಉಡುಗೆ ಇದೇ ಎಂದು ತಿಳಿದಿದೆ. ಅಧಿಕಾರಿಗಳು ಇಂಡೋನೇಷಿಯನ್ ಕೋಸ್ಟ್ ಗಾರ್ಡ್ ಅನ್ನು ಸಂಪರ್ಕಿಸಿ, ಕಾಣೆಯಾದ ಕಾಲಿನ್ ಮಾನ್ಫೋರ್ನ ಸಂಬಂಧಿಕರು ಮತ್ತು ಸ್ನೇಹಿತರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಆದರೆ, ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೊಂದು ಸತ್ಯ ಸಂಗತಿಯೋ ಕಟ್ಟು ಕತೆಯೋ ಎಂಬ ಚರ್ಚೆಗಳು ಶುರುವಾಗಿದೆ.