ಜೆರುಸಲೇಂ, ಅ.13(DaijiworldNews/AA): ವಿಶ್ವ ವಿಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಬಾಂಧವ್ಯದ 'ಚಾಂಪಿಯನ್' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಭಾರತ ಹಾಗೂ ಇಸ್ರೇಲ್ ನಡುವಣ ಬಾಂಧವ್ಯ ವೃದ್ಧಿಯಲ್ಲಿ ರತನ್ ಟಾಟಾ ನೀಡಿರುವ ಕೊಡುಗೆಗಳನ್ನು ಮೆಲುಕು ಹಾಕಿದ್ದಾರೆ.
ನಾನು ಮತ್ತು ಇಸ್ರೇಲ್ನ ಜನತೆ ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ರತನ್ ಟಾಟಾ ಅವರು ಉಭಯ ದೇಶಗಳ ನಡುವಣ ಸ್ನೇಹ ಬಾಂಧವ್ಯದ ಚಾಂಪಿಯನ್'. ರತನ್ ಟಾಟಾ ಅವರ ಕುಟುಂಬಕ್ಕೆ ನನ್ನ ಸಂತಾಪಗಳನ್ನು ಸೂಚಿಸುವಂತೆ ಪ್ರಧಾನಿ ಮೋದಿ ಅವರಿಗೆ ನೆತನ್ಯಾಹು ತಿಳಿಸಿದ್ದಾರೆ.
ಇನ್ನು ರತನ್ ಟಾಟಾ ಅವರ ನಿಧನಕ್ಕೆ ಸಿಂಗಪುರ ನೂತನ ಪ್ರಧಾನಿ ಲಾರೆನ್ಸ್ ವಾಂಗ್ ಹಾಗೂ ಅವರು ಕೂಡ ಸಂತಾಪ ಸೂಚಿಸಿದ್ದಾರೆ. 'ರತನ್ ಟಾಟಾ ತಮ್ಮ ದೇಶದ ನಿಜವಾದ ಸ್ನೇಹಿತ' ಎಂದು ಲಾರೆನ್ಸ್ ವಾಂಗ್ ಹೇಳಿದ್ದಾರೆ. ಹಾಗೂ ಇಮ್ಯಾನುಯೆಲ್ ಮ್ಯಾಕ್ರನ್ ಅವರು ನಾವೀನ್ಯತೆ ಮತ್ತು ಭಾರತ- ಫ್ರಾನ್ಸ್ನಲ್ಲಿ ಕೈಗಾರಿಕೋದ್ಯಮ ವೃದ್ಧಿಸುವಲ್ಲಿ ರತನ್ ಟಾಟಾ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.