ಮ್ಯಾಡ್ರಿಡ್, ನ.02(DaijiworldNews/AA): ಸ್ಪೇನ್ನಲ್ಲಿ ಭಾರಿ ಮಳೆಯಿಂದಾಗಿ ದಕ್ಷಿಣದ ಪ್ರಾಂತ್ಯಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಭೂಕುಸಿತ ಹಾಗೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ.
ಪ್ರವಾಹದಿಂದಾಗಿ ವೆಲೆನ್ಸಿಯಾದಲ್ಲೇ ಬರೋಬ್ಬರಿ 202 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಇಲ್ಲಿನ ಸುಮಾರು 75,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯ ನಾಯಕ ಕಾರ್ಲೋಸ್ ಮಜಾನ್ ಮಾಹಿತಿ ನೀಡಿದ್ದಾರೆ.
ನೆರೆಯ ಪ್ರಾಂತ್ಯಗಳಲ್ಲಿ ಮೂರು ಸಾವು ಸಂಭವಿಸಿವೆ. ಪ್ರವಾಹದಿಂದಾಗಿ ಮುಳುಗಡೆಯಾಗಿರುವ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕಎದುರಾಗಿದೆ.
ಗುರುವಾರ ಮತ್ತು ಶುಕ್ರವಾರ ರಾತ್ರಿ ಇತರ ಪ್ರಾಂತ್ಯಗಳಲ್ಲಿಯೂ ಭಾರೀ ಮಳೆಯಾಗಿದೆ. ಅಂಡಲೂಸಿಯಾದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಪಶ್ಚಿಮದ ಹುಯೆಲ್ವಾ ಪ್ರಾಂತ್ಯದಲ್ಲಿಯೂ ಭಾರೀ ಮಳೆ ಸುರಿದಿದೆ. ಶುಕ್ರವಾರ 'ಹಾಲೊವೀನ್' ಆಚರಣೆಯ ಸಂಭ್ರಮಲ್ಲಿದ್ದ ಅಲ್ಲಿಯ ಜನರಿಗೆ ಮನೆಗಳಿಂದ ಹೊರಗೆ ಬರದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಷ್ಟ್ರೀಯ ಪೊಲೀಸ್ ಪಡೆ, ಸಿವಿಲ್ ಗಾರ್ಡ್ ಮತ್ತು ಇತರ ಭದ್ರತಾ ಪಡೆಗಳ ನೂರಾರು ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸೇನೆಯು 750 ಯೋಧರನ್ನು ಕಳುಹಿಸಿದೆ ಎಂದು ಸ್ಪೇನ್ ರಕ್ಷಣಾ ಸಚಿವಾಲಯ ಹೇಳಿದೆ.