ಪರ್ತ್ (ಆಸ್ಟ್ರೇಲಿಯಾ), ನ.16(DaijiworldNews/AA): 2015ರಲ್ಲಿ 70 ತುಳು ಕುಟುಂಬಗಳಿಂದ ಪ್ರಾರಂಭವಾದ 'ನಮ್ಮ ಕರಾವಳಿ ಪರ್ತ್' ಸಮುದಾಯ ಕಾರ್ಯಕ್ರಮವು, ತನ್ನ 10ನೇ ದೀಪಾವಳಿ ಉತ್ಸವವನ್ನು ನವೆಂಬರ್ 9ರಂದು ಅದ್ದೂರಿಯಾಗಿ ಆಚರಿಸಿತು. ಈ ಬಾರಿಯ ದೀಪಾವಳಿ ಕಾರ್ಯಕ್ರಮವು ಪರ್ತ್ನಲ್ಲಿನ ಕರಾವಳಿ ಸಮುದಾಯದ ಜನರಿಂದ ನಿಶ್ಚಿತ ಶ್ರದ್ಧೆ ಮತ್ತು ಹರ್ಷಭಾವದಿಂದ ಆಚರಿಸಲ್ಪಟ್ಟಿತು.
ಇದೇ ಕಾರ್ಯಕ್ರಮವು ತುಳುನಾಡು ಮೂಲದ ಕುಟುಂಬಗಳನ್ನು ಕೇವಲ ಸೇರಿಸುವುದಲ್ಲ, ಬೇರೆ ಬೇರೆ ಜನಾಂಗದವರಿಗೂ ಕರಾವಳಿ ಸಂಸ್ಕೃತಿಯನ್ನು ಪರಿಚಯಿಸುತ್ತಿದೆ. ನಮ್ಮ ಕರಾವಳಿ ಪರ್ತ್ ತನ್ನ ಸ್ಥಳೀಯ ಕಾರ್ಯಕ್ರಮಗಳಲ್ಲಿ ಒಳಾಂಗಣ, ಹೊರಾಂಗಣ ಆಟಗಳು, ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಸೇರಿದಂತೆ ವಾರ್ಷಿಕ ದೀಪಾವಳಿ ಉತ್ಸವವನ್ನು ವಿಭಿನ್ನ ಶೈಲಿಯಲ್ಲಿ ಆಯೋಜಿಸುತ್ತಿದೆ.
ಈ ವರ್ಷದ ದೀಪಾವಳಿ ಕಾರ್ಯಕ್ರಮವು ಸಾಂಸ್ಕೃತಿಕ ಮತ್ತು ಭಕ್ತಿಯ ವಾತಾವರಣದೊಂದಿಗೆ ಆಯೋಜಿಸಲಾಯಿತು. ಇದರಲ್ಲಿ ನೃತ್ಯ, ಸಂಗೀತ, ಯಕ್ಷಗಾನ, ಹಾಸ್ಯ ಕಲಾವಿದರ ವಿಭಿನ್ನ ಪ್ರದರ್ಶನಗಳು ಸೇರಿದವು. ಮಕ್ಕಳು ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸುತ್ತ, ವಿವಿಧ ಆಟಗಳು ಮತ್ತು ಮನರಂಜನೆಯ ಮೂಲಕ ಉತ್ಸಾಹ ತುಂಬಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ದಾಯ್ಜಿವರ್ಲ್ಡ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಪ್ರೈವೆಟ್ ಚಾಲೆಂಜ್'ನ ತುಳುನಾಡು ಮಾಣಿಕ್ಯ ಅರವಿಂದ ಬೋಳಾರ್ ಹಾಗೂ ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರ ಹಾಸ್ಯಪ್ರದರ್ಶನವು ನೆರೆದಿದ್ದವರನ್ನು ರಂಜಿಸಿತು. ಸುಮಾರು 450ಕ್ಕೂ ಹೆಚ್ಚು ಜನರಿಂದ ಕರ್ತಲತಾಳದೊಂದಿಗೆ ಸ್ವಾಗತಿಸಲ್ಪಟ್ಟ ಬೋಳಾರ್ ಮತ್ತು ನಂದಳಿಕೆ ಅವರಿಗೆ ಶಾಲು, ಪೇಟಾ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಬೋಳಾರ್ ಅವರು, ನಮ್ಮ ತುಳು ಜನರು ಸ್ವದೇಶದಿಂದ ಅದೆಷ್ಟೋ ದೂರದಲ್ಲಿದ್ದರೂ, ಸಂಸ್ಕೃತಿಯನ್ನು ಅನುಸರಿಸುವುದನ್ನು ನೋಡಿ ಸಂತೋಷವಾಗುತ್ತಿದೆ. ಈ ದಿನವನ್ನು ನಾವು ಎಂದೆAದಿಗೂ ನೆನೆಸಿಕೊಳ್ಳುತ್ತೇವೆ ಎಂದರು.
ವಾಲ್ಟರ್ ನಂದಳಿಕೆ, ಪರ್ತ್ನ ತುಳು ಜನರ ಶ್ರಮವನ್ನು ಪ್ರಶಂಸಿಸುತ್ತ, "ಪಿತರ ಅನುಭಾವದೊಂದಿಗೆ ಸಿಡ್ನಿಯಲ್ಲಿ ನನ್ನ ಆಸ್ಟ್ರೇಲಿಯಾ ಪ್ರವಾಸದ ಕನಸು ಸತ್ಯವಾಯಿತು. ಈ ವರ್ಷ, ಇನ್ನೊಂದು ಕನಸು ನನಸಾಗಿದೆ. ನನಗೆ ಪರ್ತ್ನ ಐತಿಹಾಸಿಕ ಕ್ರೀಡಾಂಗಣದಲ್ಲಿ ಲೈವ್ ಕ್ರಿಕೆಟ್ ನೋಡಲು ಅವಕಾಶ ಸಿಕ್ಕಿದೆ. ಈ ಬದ್ಧತೆಯನ್ನು ಮುಂದುವರಿಸಿ, ಹೆಚ್ಚು ಹೆಚ್ಚು ಕಲಾವಿದರನ್ನು ತುಳುನಾಡಿನಿಂದ ಕರೆತರಬೇಕು" ಎಂದು ತಿಳಿಸಿದರು.
ನಮ್ಮ ಕರಾವಳಿಯ ವಿಶಿಷ್ಟ ವೈಶಿಷ್ಟ್ಯವೆಂದರೆ, ಇಲ್ಲಿ ಯಾವುದೇ ಹುದ್ದೆಗಳಿಲ್ಲ, ಚುನಾವಣೆಗಳಿಲ್ಲ. ಪ್ರತಿ ವರ್ಷ 5 ರಿಂದ 6 ಉತ್ಸಾಹಿ ಸದಸ್ಯರಿಂದ ಆಯೋಜನಾ ಸಮಿತಿ ರೂಪಿಸಲಾಗುತ್ತದೆ. ಸಹಾಯಕ ಸದಸ್ಯರ ಬೆಂಬಲದೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತದೆ. ಇದು ತಂಡ ಶ್ರದ್ಧೆಯ ಶಕ್ತಿ ಎನ್ನುವುದಕ್ಕೆ ನಿದರ್ಶನವಾಗಿದೆ.
ಕಾರ್ಯಕ್ರಮವು ಅದ್ದೂರಿ ಭೋಜನದೊಂದಿಗೆ ಸಮಾರೋಪಗೊಂಡಿತು. ಭಾಗವಹಿಸಿದವರು ತುಳುನಾಡಿನ ಸಾಂಸ್ಕೃತಿಕ ಬಣ್ಣಗಳು ಹಾಗೂ ತುಳುನಾಡಿನ ಸತ್ವದಿಂದ ತುಂಬಿದ ರೋಮಾಂಚಕ ನೆನಪುಗಳನ್ನು ಮೆಲುಕು ಹಾಕಿದರು.