ಇಸ್ಲಾಮಾಬಾದ್, ಜೂ08(Daijiworld News/SS): ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ವಿವಾದವನ್ನು ಪರಸ್ಪರ ಮಾತುಕತೆ ನಡೆಸಿ, ಆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳೋಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಕಾಶ್ಮೀರ ವಿವಾದದ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪಾಕ್ ಬರೆದಿರುವ ಪತ್ರದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಎಲ್ಲಾ ಬಗೆಯ ವಿವಾದಗಳು, ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮಾತ್ರವಲ್ಲ, ಎರಡೂ ದೇಶದ ಜನರು ಬಡತನದಿಂದ ಹೊರಬರುವುದಕ್ಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಮಾತುಕತೆ ನಡೆಸುವುದು ಅನಿವಾರ್ಯ. ಬೇರೆ ಯಾವುದರಿಂದಲೂ ಇದರ ಪರಿಹಾರ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪತ್ರಿಕೆಗಳೂ ಕೂಡ ಈ ಕುರಿತು ವರದಿ ಮಾಡಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೂಡುವಂತೆ ಮಾಡಲು ಪಾಕ್ ಬದ್ಧವಾಗಿದೆ. ಆದ್ದರಿಂದ ಈ ವಿಷಯವಾಗಿ ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.