ವಾಷಿಂಗ್ಟನ್, ಡಿ.23(DaijiworldNews/AA): ಶ್ವೇತಭವನದ ಕೃತಕ ಬುದ್ಧಿಮತ್ತೆ(ಎಐ) ವಿಭಾಗದ ಹಿರಿಯ ನೀತಿ ಸಲಹೆಗಾರರನ್ನಾಗಿ ಭಾರತ ಮೂಲದ ಉದ್ಯಮಿ ಹಾಗೂ ಲೇಖಕರೂ ಆಗಿರುವ ಶ್ರೀರಾಮ್ ಕೃಷ್ಣನ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
ಶ್ರೀರಾಮ್ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ (ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ) ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್ ಭಾನುವಾರ ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಟ್ರಂಪ್ ಬಳಗ ಸೇರಿದ ೩ನೇ ಭಾರತೀಯ ಶ್ರೀರಾಮ್ ಕೃಷ್ಣನ್ ಎಂದೆನಿಸಿಕೊಂಡಿದ್ದಾರೆ.
ಶ್ರೀರಾಮ್ ಕೃಷ್ಣನ್ ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್ಬುಕ್ ಮತ್ತು ಸ್ಕ್ಯಾಪ್ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ವೈಟ್ ಹೌಸ್ ಎಐ ಮತ್ತು ಕ್ರಿಸ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಸೇವೆ ಸಲ್ಲಿಸಲಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶ್ರೀರಾಮ್ ಕೃಷ್ಣನ್ ಅವರು, ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಬರೆದುಕೊಂಡಿದ್ದಾರೆ.