ಇಸ್ಲಮಾಬಾದ್, ಡಿ.25(DaijiworldNews/AA): ಪಾಕಿಸ್ತಾನವು ತನ್ನ ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ಪರಿಣಾಮ 15 ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.
ಪಾಕಿಸ್ತಾನ ಡಿ.24 ರ ರಾತ್ರಿ ನಡೆಸಿದ ಈ ವೈಮಾನಿಕ ದಾಳಿಯಲ್ಲಿ ಲಾಮನ್ ಸೇರಿದಂತೆ 7 ಗ್ರಾಮಗಳನ್ನು ಗುರಿಯಾಗಿಸಿತ್ತು. ಅಲ್ಲಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಫೈಟರ್ ಜೆಟ್ಗಳು ಈ ಬಾಂಬ್ ದಾಳಿ ನಡೆಸಿವೆ ಎಂದು ವರದಿಯಾಗಿದೆ.
ಈ ದಾಳಿಯಲ್ಲಿ ತಾಲಿಬಾನ್ ತರಬೇತಿ ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅನೇಕ ಭಯೋತ್ಪಾದಕರು ಹತರಾಗಿದ್ದಾರೆ. ಬರ್ಮಾಲ್ನ ಮುರ್ಗ್ ಬಜಾರ್ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಫ್ಘಾನ್ ಮಾಧ್ಯಮಗಳ ಪ್ರಕಾರ, ಈ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ. ದಾಳಿಯಿಂದ ಭಾರಿ ವಿನಾಶ ಸಂಭವಿಸಿದೆ. ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗಿದೆ.