ಸಿಯೋಲ್, ಡಿ.29(DaijiworldNews/AA): ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂದು 181 ಜನ ಪ್ರಯಾಣಿಕರಿದ್ದ 'ಜೆಜು ಏರ್' ವಿಮಾನವು ಲ್ಯಾಂಡಿಂಗ್ ಗೇರ್ ವೈಫಲ್ಯದಿಂದಾಗಿ ಲಾಂಡಿಂಗ್ ವೇಳೆ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.
ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್ವೇನಿಂದ ಜಾರಿದ ವಿಮಾನವು, ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ವಿಮಾನವು ಡಿಕ್ಕಿ ಹೊಡೆದ ರಭಸಕ್ಕೆ ತಕ್ಷಣವೇ ವಿಮಾನ ಹೊತ್ತಿ ಉರಿದಿದೆ. ಬ್ಯಾಂಕಾಕ್ನಿಂದ ಬಂದ ಈ ವಿಮಾನದಲ್ಲಿ 175 ಮಂದಿ ಪ್ರಯಾಣಿಕರು ಮತ್ತು 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 181 ಜನರಿದ್ದರು. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ
ಎಂದು ತಿಳಿದುಬಂದಿದೆ.
ದುರಂತದ ಬೆನ್ನಲ್ಲೇ ಕ್ಷಮೆ ಯಾಚಿಸಿದ 'ಜೆಜು ಏರ್' ಸಂಸ್ಥೆ
ವಿಮಾನ ದುರಂತದ ಘಟಿಸಿದ ಬೆನ್ನಲ್ಲೇ ಜೆಜು ಏರ್ ಸಂಸ್ಥೆ ಕ್ಷಮೆ ಯಾಚಿಸಿದೆ. ಮುಯಾನ್ ವಿಮಾನ ದುರಂತದಲ್ಲಿ ಸಂಕಷ್ಟಕ್ಕೀಡಾದ ಪ್ರತಿಯೊಬ್ಬರಲ್ಲಿಯೂ ಕ್ಷಮೆ ಕೋರುತ್ತೇವೆ. ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ದುರ್ಘಟನೆಯ ಬಗ್ಗೆ ವಿಷಾದಿಸುತ್ತೇವೆ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಸಂತ್ರಸ್ತರ ಕುಟುಂಬದವರಿಗೆ ನೆರವಾಗುವ ಸಲುವಾಗಿ, ವಿಮಾನ ನಿಲ್ದಾಣವಿದ್ದ ಜಿಯೊಲ್ಲನಮ್-ಡೊ ಪ್ರಾಂತ್ಯದಲ್ಲಿ ತಾತ್ಕಾಲಿಕವಾಗಿ ವಿಶೇಷ ರೈಲು ಕಾರ್ಯಾಚರಣೆ ಆರಂಭಿಸುವುದಾಗಿ ಕೊರಿಯಾ ರೈಲ್ವೆ ಹೇಳಿದೆ. ಅಲ್ಲದೇ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಶವಾಗಾರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ 94 ಶವಗಳನ್ನು ಇರಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.