ಸನಾ, ಡಿ.31(DaijiworldNews/AA): ಯೆಮನ್ ಪ್ರಜೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ನರ್ಸ್ಗೆ ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಮರಣದಂಡನೆಗೆ ಅನುಮತಿ ನೀಡಿದ್ದರು. ಬಳಿಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಕೇರಳ ಮೂಲದ ನಿಮಿಶಾ ಪ್ರಿಯಾ 2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿಯನ್ನು ಕೊಂದ ಹಿನ್ನೆಲೆ 2018ರಲ್ಲಿ ಆಕೆಯನ್ನು ಅಪರಾಧಿಯೆಂದು ಸಾಬೀತು ಪಡಿಸಲಾಗಿತ್ತು. ಬಳಿಕ ಕೇರಳ ಮೂಲದ ನರ್ಸ್ಗೆ 2020ರಲ್ಲಿ ಯೆಮನ್ನ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶ ಹೊರಡಿಸಿತ್ತು.
ಮರಣದಂಡನೆ ಆದೇಶಿಸಿದ ದಿನದಿಂದಲೂ ನರ್ಸ್ ಕುಟುಂಬ ಬಿಡುಗಡೆಗಾಗಿ ಪರದಾಡುತ್ತಿದೆ. ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ 2024ರ ಆರಂಭದಲ್ಲಿ ಯೆಮನ್ಗೆ ಭೇಟಿ ನೀಡಿ, ಮರಣದಂಡನೆಯನ್ನು ಮನ್ನಾ ಮಾಡುವಂತೆ ಕೋರಿಕೊಂಡಿದ್ದರು. ಜೊತೆಗೆ ಸಂತ್ರಸ್ತರ ಕುಟುಂಬದೊಂದಿಗೆ ಹಣಕಾಸಿನ ಮಾತುಕತೆಯ ನಡೆಸಿದ್ದರು.
ವರದಿಗಳ ಪ್ರಕಾರ ಒಂದು ತಿಂಗಳೊಳಗೆ ನರ್ಸ್ ನಿಮಿಶಾ ಪ್ರಿಯಾಗೆ ಮರಣದಂಡನೆ ಜಾರಿಯಾಗುವ ನಿರೀಕ್ಷೆಯಿದೆ. ಯೆಮನ್ನಲ್ಲಿ ನಿಮಿಷಾ ಪ್ರಿಯಾಗೆ ಶಿಕ್ಷೆ ನೀಡುವ ಬಗ್ಗೆ ನಮಗೆ ತಿಳಿದಿದೆ. ಉಳಿದಿರುವ ಪರ್ಯಾಯ ಆಯ್ಕೆಗಳ ಬಗ್ಗೆ ಅವರ ಕುಟುಂಬ ಯೋಚಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.