ಸ್ಯಾಕ್ರಮೆಂಟೊ, ಜ.03 (DaijiworldNews/AK):ವಿಮಾನವೊಂದು ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಲಾಸ್ ಏಂಜಲೀಸ್ನ ಆಗ್ನೇಯಕ್ಕೆ ಸುಮಾರು 25 ಮೈಲಿ ದೂರದ ಫುಲ್ಲರ್ಟನ್ ಮುನ್ಸಿಪಲ್ ಏರ್ಪೋರ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಆರ್ವಿ-10 ಎಂದು ಗುರುತಿಸಲಾದ ವಿಮಾನವು ಫರ್ನಿಚರ್ ತಯಾರಿಕಾ ಕಂಪನಿಯ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಗೋಡೆಯಲ್ಲಿ ರಂಧ್ರ ನಿರ್ಮಾಣವಾಗಿ, ಅವ್ಯವಸ್ಥೆ ಉಂಟಾಯಿತು.
ಈ ಕುರಿತು ಅಧಿಕಾರಿಗಳು ಮಾತನಾಡಿ, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಕಟ್ಟಡದೊಳಗಿದ್ದ ಜನರನ್ನು ತಕ್ಷಣವೇ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು ಎಂದು ತಿಳಿಸಿದ್ದಾರೆ.
ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದಟ್ಟವಾದ ಹೊಗೆ ಆವರಿಸುವುದು ಕಂಡು ಬಂದಿದೆ. ಸದ್ಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ನಿಖರ ಕಾರಣಕ್ಕಾಗಿ ತನಿಖೆಯನ್ನು ಪ್ರಾರಂಭಿಸಿದೆ.