ವಾಷಿಂಗ್ಟನ್, ಜ.09 (DaijiworldNews/AK):ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟು ಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ.
ದುರ್ಘಟನೆಯಲ್ಲಿ ಈವರೆಗೆ ಐವರು ಸಜೀವ ದಹನವಾಗಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 1,500 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ.
ಲಾಸ್ ಏಂಜಲೀಸ್ನಾದ್ಯಂತ ನಿಯಂತ್ರಣ ಮೀರಿದ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿರುವುದರಿಂದ, ಸನ್ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್ನಲ್ಲಿ ಕಾಣಿಸಿಕೊಂಡಿದೆ.
ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ʻಸಾಂಟಾ ಅನಾʼಚಂಡಮಾರುತದಿಂದ ಪರಿಸ್ಥಿತಿ ಹದಗೆಡುತ್ತಲೇ ಇದೆ. ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಪತ್ತು ಘೋಷಣೆಗೆ ಸಹಿ ಹಾಕಿದ್ದಾರೆ. ಕಾಡ್ಗಿಚ್ಚಿನಿಂದ ಆಶ್ರಯ ಕಳೆದುಕೊಂಡವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.