ಕೊಲಂಬೊ, ಜ.12 (DaijiworldNews/AA): ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದ 8 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ. ಅಲ್ಲದೆ ಅವರಿಂದ ಎರಡು ದೋಣಿಗಳನ್ನು ಜಪ್ತಿ ಮಾಡಿರುವುದಾಗಿ ಶ್ರೀಲಂಕಾ ಜಲಸೇನೆ ಭಾನುವಾರ ತಿಳಿಸಿದೆ.
ಮನ್ನಾರ್ನ ಉತ್ತರ ಭಾಗದಲ್ಲಿ ಶನಿವಾರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಜಲಸೇನೆ ಪ್ರಕಟಣೆಯಲ್ಲಿ ಹೇಳಿದೆ.
ಇದರೊಂದಿಗೆ ಒಟ್ಟು 18 ಭಾರತೀಯ ಮೀನುಗಾರರನ್ನು ಬಂಧಿಸಿದಂತಾಗಿದೆ. ಜಪ್ತಿ ಮಾಡಿದ ದೋಣಿಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಶ್ರೀಲಂಕಾದ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಭಾರತದ ಮೀನುಗಾರಿಕಾ ದೋಣಿಗಳನ್ನು ಪತ್ತೆ ಮಾಡಲಾಯಿತು. ಕಾರ್ಯಾಚರಣೆಯಲ್ಲಿ 2 ಭಾರತೀಯ ಮೀನುಗಾರಿಕಾ ಬೋಟ್ಗಳನ್ನು ಜಪ್ತಿ ಮಾಡಿ 8 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಬಂಧಿತ ಮೀನುಗಾರರು ಹಾಗೂ ಅವರ ದೋಣಿಗಳನ್ನು ಇರಾನ್ವಟಿವು ದ್ವೀಪಕ್ಕೆ ಕರೆತರಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಅವರನ್ನು ಕಿಲಿನೊಚ್ಚಿಯ ಸಹಾಯಕ ಮೀನುಗಾರಿಕೆ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.