ಮೊರಾಕೊ, ಜ.17 (DaijiworldNews/AA): 80 ವಲಸಿಗರನ್ನು ಹೊತ್ತು ಅಕ್ರಮವಾಗಿ ಸ್ಪೇನ್ಗೆ ತೆರಳಲು ಯತ್ನಿಸುತ್ತಿದ್ದ ದೋಣಿ ಮೊರಾಕೊದ ಸಮುದ್ರದಲ್ಲಿ ಮಗುಚಿದೆ. ಪರಿಣಾಮ 40 ಪಾಕಿಸ್ತಾನಿಗಳು ಸೇರಿ ಒಟ್ಟು 50 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೊರೊಕನ್ ಅಧಿಕಾರಿಗಳು ದೋಣಿ ಮೂಲಕ 30 ಮಂದಿಯನ್ನು ರಕ್ಷಿಸಿದ್ದಾರೆ. 80 ವಲಸಿಗರನ್ನು ಹೊತ್ತು ಈ ದೋಣಿಯು ಜನವರಿ 2ರಂದು ಮಾರಿಷಸ್ನಿಂದ ಹೊರಟಿತ್ತು. ಈ ದೋಣಿಯು ಮೊರೊಕ್ಕನ್ ಬಂದರಿನ ದಖ್ಲಾದಲ್ಲಿ ಮಗುಚಿದೆ ಎಂದು ಹೇಳಲಾಗಿದೆ.
50ಕ್ಕೂ ಹೆಚ್ಚು ವಲಸಿಗರು ಅಪಘಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತರ ಗುರುತುಗಳನ್ನು ದೃಢೀಕರಿಸಲು ಮತ್ತು ಬದುಕುಳಿದವರಿಗೆ ನೆರವು ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಅವಘಡದ ಬಳಿಕ ಪರಿಸ್ಥಿತಿಯನ್ನು ನಿಭಾಯಿಸಲು ಮೊರಾಕೊ ಮತ್ತು ಪಾಕಿಸ್ತಾನ ಎರಡೂ ಅಧಿಕಾರಿಗಳು ಜಂಟಿಯಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ಮೊರಾಕೊದಲ್ಲಿರುವ ತನ್ನ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ. ಹೆಚ್ಚುವರಿಯಾಗಿ, ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಲು ಮತ್ತು ಅಗತ್ಯ ನೆರವು ನೀಡಲು ಮೊರಾಕೊದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ತಂಡವನ್ನು ದಖ್ಲಾಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಹ ಸಕ್ರಿಯಗೊಳಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಸಂತ್ರಸ್ತ ಪಾಕಿಸ್ತಾನಿಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ.