ಜೆರುಸಲೇಂ, ಜ.18 (DaijiworldNews/AA): ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಇಸ್ರೇಲ್ನ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿದೆ.
ಇಸ್ರೇಲ್ನ ಸಚಿವ ಸಂಪುಟ ಶನಿವಾರ ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಅನುಮೋದಿಸಲು ಮತ ಚಲಾಯಿಸಿದೆ. ಕದನ ವಿರಾಮ ಭಾನುವಾರದಿಂದ ಪ್ರಾರಂಭವಾಗಲಿದೆ. ಗಾಜಾದ ಅತ್ಯಂತ ಮಾರಕ ಯುದ್ಧ ಮತ್ತು ಬಾಂಬ್ ದಾಳಿಗೆ ತೆರೆಬೀಳಲಿದೆ.
ಇಸ್ರೇಲ್ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳು ನಾಳೆ ಬಿಡುಗಡೆಗೊಳ್ಳಲಿದ್ದಾರೆ. 2023 ರ ಅ.7 ರಂದು ಹಮಾಸ್ ಬಂಡುಕೋರರ ಗುಂಪು ಇಸ್ರೇಲ್ ಮೇಲೆ ದಾಳಿ ನಡೆಸಿ ಪ್ರದೇಶದಲ್ಲಿದ್ದ ಒತ್ತೆಯಾಳುಗಳನ್ನು ಬಂಧಿಸಲಾಗಿತ್ತು. ಇದೀಗ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಅಸ್ತು ಎಂದಿದೆ.
ಸರ್ಕಾರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಅನುಮೋದಿಸಿದೆ ಎಂದು ಕ್ಯಾಬಿನೆಟ್ ಮತದಾನದ ಬಳಿಕ ಶನಿವಾರ ಬೆಳಿಗ್ಗೆ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಸರ್ಕಾರದ ಅನುಮೋದನೆಗೆ ಒಳಪಟ್ಟು ನಾಳೆ ಬಿಡುಗಡೆಯಾಗಲಿರುವ 95 ಪ್ಯಾಲೆಸ್ಟೀನಿಯನ್ನರ ಪಟ್ಟಿಯನ್ನು ನ್ಯಾಯ ಸಚಿವಾಲಯ ಪ್ರಕಟಿಸಿದೆ. ಅವರಲ್ಲಿ 69 ಮಹಿಳೆಯರು, 16 ಪುರುಷರು ಮತ್ತು 10 ಅಪ್ರಾಪ್ತರು ಒಳಗೊಂಡಿದ್ದಾರೆ.