ಲೆಬನಾನ್, ಜ.26 (DaijiworldNews/AA): ಪ್ರತಿಭಟನಾಕಾರರ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 3 ಜನರು ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಲೆಬನಾನ್ನಲ್ಲಿ ಇಂದು ಸಂಭವಿಸಿದೆ.
ಗಡಿ ಗ್ರಾಮವಾದ ಹೌಲಾದಲ್ಲಿ ಓರ್ವ ಪ್ರತಿಭಟನಾಕಾರ ಸಾವಿಗೀಡಾದರೆ, 10 ಮಂದಿ ಗಾಯಗೊಂಡಿದ್ದಾರೆ. ಐನ್ ಹಾಗೂ ಬ್ಲಿಡಾ ಗ್ರಾಮದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಒಡಾಯಿಸೆ, ರಬ್ ತಲಾತಿನ್ ಹಾಗೂ ಫರ್ ಕಿಲಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇಸ್ರೇಲಿ ಪಡೆಗಳ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕದನ ವಿರಾಮ ಒಪ್ಪಂದಂತೆ 60 ದಿನಗಳ ಒಳಗಾಗಿ ಇಸ್ರೇಲ್ ಪಡೆಗಳು ಸ್ಥಳದಿಂದ ತೆರವುಗೊಳ್ಳದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಗಡಿಯಲ್ಲಿರುವ ಹಲವು ಪ್ರದೇಶಗಳಿಗೆ ನುಗ್ಗಲು ಯತ್ನಿಸಿದ್ದಾರೆ. ಕಳೆದ ವರ್ಷದ ನವೆಂಬರ್ನಲ್ಲಿ ನಡೆದ ಕದನ ವಿರಾಮ ಒಪ್ಪಂದ ಅಡಿಯಲ್ಲಿ ಇಸ್ರೇಲಿ ಪಡೆಗಳು 60 ದಿನಗಳ ಒಳಗಾಗಿ ಸ್ಥಳದಿಂದ ತೆರವುಗೊಳ್ಳಬೇಕಿತ್ತು.
'ಲೆಬನಾನ್ನನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ನಿಮ್ಮ ಹಕ್ಕುಗಳು ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ನಾನು ಉನ್ನತ ಪ್ರಯತ್ನ ಮಾಡುತ್ತೇನೆ' ಎಂದು ಘಟನೆಯ ಕುರಿತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಪ್ರತಿಕ್ರಿಯೆ ನೀಡಿದ್ದಾರೆ.