ವಾಷಿಂಗ್ಟನ್, ಫೆ.26 (DaijiworldNews/AA): ಈಗಾಗಲೇ ಕಠಿಣ ವಲಸೆ ನೀತಿಯಿಂದ ಅಕ್ರಮ ವಲಸಿಗರನ್ನು ಅಮೆರಿಕ ದೇಶದಿಂದಲೇ ಹೊರಹಾಕಲಾಗುತ್ತಿದೆ. ಇದೀಗ ಶ್ರೀಮಂತ ವಲಸಿಗರ ಮನವೋಲಿಕೆಗೆ ಹೊಸ ಯೋಜನೆಯೊಂದನ್ನ ಜಾರಿಗೆ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಶ್ರೀಮಂತ ವಲಸಿಗರಿಗೆ ಗೋಲ್ಡ್ ಕಾರ್ಡ್ ಗಳನ್ನು ಪರಿಚಯಿಸುವ ಮೂಲಕ ಅಮೆರಿಕನ್ ಪೌರತ್ವ ಪಡೆಯುವುದನ್ನು ಸುಲಭಗೊಳಿಸಲು ಟ್ರಂಪ್ ಯೋಜಿಸುತ್ತಿದ್ದಾರೆ. ಈ ಗೋಲ್ಡ್ ಕಾರ್ಡ್ ಗಳನ್ನು ಶ್ರೀಮಂತ ವಲಸಿಗರು 5 ಮಿಲಿಯಲ್ ಅಮೆರಿಕನ್ ಡಾಲರ್ ಪಾವತಿಸಿ ಖರೀದಿಸಬಹುದಾಗಿದೆ.
ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ಮಾತ್ರ ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ EB-5 ವೀಸಾ ಯೋಜನೆಯನ್ನು ಗೋಲ್ಡ್ ಕಾರ್ಡ್ನೊಂದಿಗೆ ಬದಲಾಯಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಗೋಲ್ಡ್ ಕಾರ್ಡ್ ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು 1 ಮಿಲಿಯನ್ ಗೋಲ್ಡ್ ಕಾರ್ಡ್ ಗಳನ್ನು ಮಾರಾಟ ಮಾಡುವ ಉದ್ದೇಶವಿದ್ದು, ಈ ಉಪಕ್ರಮವು ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.