ಕೆನಡಾ, ಏ.19 (DaijiworldNews/AA): ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯೊಂದರಲ್ಲಿ ಅಕಸ್ಮಾತಾಗಿ ಗುಂಡು ತಗುಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧಾವಾ ಸಾವನ್ನಪ್ಪಿದ ಘಟನೆ ಕೆನಡಾದಲ್ಲಿ ನಡೆದಿದೆ.

ಒಂಟೋರಿಯೋದ ಹ್ಯಾಮಿಲ್ಟನ್ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಹರ್ಸಿಮ್ರತ್ ರಾಂಧಾವಾ ವ್ಯಾಸಂಗ ಮಾಡುತ್ತಿದ್ದರು. ಅವರು ಬಸ್ಸು ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟೊರೆಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿನಿಯ ಸಾವಿನಿಂದ ಬಹಳ ದುಃಖವಾಗಿದೆ ಎಂದು ತಿಳಿಸಿದೆ.
ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿನಿ ಅಮಾಯಕಳಾಗಿದ್ದಾಳೆ. ಎರಡು ವಾಹನಗಳ ಸವಾರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಸಾವಿನ ಮತ್ತು ಗುಂಡಿನ ದಾಳಿಯ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಮುಂದುವರೆದು ನಾವು ವಿಧ್ಯಾರ್ಥಿನಿಯ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಾವಿದ್ದೇವೆ ಎಂದು ಸ್ಥಳೀಯ ಪೊಲೀಸರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಹ್ಯಾಮಿಲ್ಟನ್ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆ ಬಳಿ ಬುಧವಾರ ಸಂಜೆ 7.30 ರ ಸುಮಾರಿಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣವೇ ಸ್ಥಳಕ್ಕೆ ತೆರಳಿದ್ದೆವು. ಅಲ್ಲಿ ಭಾರತೀಯ ವಿದ್ಯಾರ್ಥಿನಿ ಗಾಯಗೊಂಡಿರುವುದು ಕಂಡುಬಂದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಸಾವನ್ನದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ದೊರೆತ ಸಿಸಿಟಿವಿ ವಿಡಿಯೋ ಪ್ರಕಾರ, ಕಪ್ಪು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಬಿಳಿ ಕಾರೊಂದರಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಸಮೀಪದ ಕೆಲವು ಮನೆಗಳ ಕಿಟಕಿಗಳಿಗೆ ಕೂಡ ಗುಂಡು ತಗುಲಿದ್ದವು. ಅದೃಷ್ಟವಶಾತ್, ಬೇರೆ ಯಾರಿಗೂ ಏನು ಗಾಯಗಳು ಅಥವಾ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.