ಡಾಕಾ, ಮೇ. 03 (DaijiworldNews/AA): ಭಾರತ ಒಂದುವೇಳೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಬಾಂಗ್ಲಾದೇಶ ಚೀನಾದ ಜೊತೆ ಕೈಜೋಡಿಸಿ ಈಶಾನ್ಯ ಭಾರತದ 7 ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮಾಜಿ ಜನರಲ್ ಫಜ್ಲುರ್ ರೆಹಮಾನ್ ಹೇಳಿದ್ದಾರೆ.

ಈ ಹಿಂದೆಯೂ ಬಾಂಗ್ಲಾ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಕೂಡ ಚೀನಾದಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರ ತೀರಿಸಿಕೊಂಡರೆ, 'ಸೆವೆನ್ ಸಿಸ್ಟರ್ಸ್' ಎಂದೂ ಕರೆಯಲ್ಪಡುವ ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಚೀನಾದೊಂದಿಗೆ ಕೈ ಜೋಡಿಸಬೇಕು ಎಂದು ಮಾಜಿ ಬಾಂಗ್ಲಾದೇಶದ ಮಿಲಿಟರಿ ಅಧಿಕಾರಿ ಮತ್ತು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಆಪ್ತ ಸಹಚರ ರೆಹಮಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿರುವ ಅವರು, "ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಂಟಿ ಮಿಲಿಟರಿ ವ್ಯವಸ್ಥೆ ಕುರಿತು ಚೀನಾದೊಂದಿಗೆ ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಫಜ್ಲುರ್ ರೆಹಮಾನ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು, ಇದು ರೆಹಮಾನ್ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಆ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.