ದುಬಾಯ್, ಮೇ. 08 (DaijiworldNews/AK): ದುಬಾಯ್ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲ್ಯನೇರ್ ಲಾಟರಿ ಖರೀದಿಸಿದ ಕಾಸರಗೋಡು ನಿವಾಸಿಗೆ 8.5 ಕೋಟಿ ರೂ. ಅದೃಷ್ಟ ಒಲಿದಿದೆ. ಯುಎಇ ಅಜ್ಮಾನ್ ನಲ್ಲಿ ವಾಸವಾಗಿರುವ ವೇಣುಗೋಪಾಲ್ ಮುಲ್ಲಚ್ಚೇರಿ ಎಪ್ರಿಲ್ 23 ರಂದು ದುಬಾಯ್ ವಿಮಾನ ನಿಲ್ದಾಣದ ಟರ್ಮಿನಲ್ -2 ರ ಒಳಗಿರುವ ಡ್ಯೂಟಿ ಫ್ರೀ ಕೌಂಟರ್ ನಿಂದ ಲಾಟರಿ ಟಿಕೇಟ್ ಖರೀದಿಸಿದ್ದರು. ನಿನ್ನೆ ಲಾಟರಿ ಡ್ರಾ ನಡೆದಿದ್ದು ವೇಣುಗೋಪಾಲ್ ಅವರಿಗೆ ದಾಖಲೆ ಮೊತ್ತದ ಅದೃಷ್ಟ ಒಲಿದಿದೆ.

ಅಜ್ಮಾನಿನ ವಾಣಿಜ್ಯ ಸಂಸ್ಥೆಯೊಂದರಲ್ಲಿ ಐಟಿ ಸಪೋರ್ಟ್ ಉದ್ಯೋಗಿಯಾಗಿರುವ ವೇಣುಗೋಪಾಲ್ ಕಳೆದ ಹದಿನೈದು ವರ್ಷಗಳಿಂದ ಡ್ಯೂಟಿ ಫ್ರೀ ಟಿಕೇಟುಗಳನ್ನು ಖರೀದಿಸಿ ಅದೃಷ್ಟ ಪರೀಕ್ಷಿಸುತ್ತಾ ಬಂದಿದ್ದಾರೆ.
“ಡ್ರಾ ದಿನವಾದ ನಿನ್ನೆ ದುಬಾಯ್ ಡ್ಯೂಟಿ ಫ್ರೀ ಫೇಸ್ ಬುಕ್ ಫೇಜ್ನಲ್ಲಿ ವಿಜೇತರ ಆಯ್ಕೆಯನ್ನು ಲೈವ್ ನೋಡುತ್ತಿದ್ದೆ. ನನ್ನ ಟಿಕೇಟಿನ ನಂಬರ್ ಅನೌನ್ಸ್ ಮಾಡಿದಾಗ ಒಮ್ಮೆಲೆ ಭ್ರಮೆಯ ಲೋಕದಲ್ಲಿದ್ದೇನೆ ಎಂದು ಭಾವಿಸಿದೆ. ಡ್ಯೂಟಿ ಫ್ರೀ ಲಾಟರಿ ಸಂಸ್ಥೆಯಿಂದ ಅಧಿಕೃತ ಕರೆ ಬಂದಾಗ ವಿಶೇಷ ಸಂತೋಷವಾಯಿತು'' ಎಂದು ವೇಣುಗೋಪಲ್ ಜಿಲ್ಲೆಯ ಮಾಧ್ಯಮಗಳಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.