ಇಸ್ಲಾಮಾಬಾದ್, ಮೇ. 11 (DaijiworldNews/AA): 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು 6 ವರ್ಷಗಳ ಬಳಿಕ ಪರೋಕ್ಷವಾಗಿ ಒಪ್ಪಿಕೊಂಡಿದೆ.

ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಮಾತನಾಡಿ, ಪುಲ್ವಾಮಾ ಭಯೋತ್ಪಾದಕ ದಾಳಿಯು ಪಾಕಿಸ್ತಾನಿ ಮಿಲಿಟರಿಯ 'ಯುದ್ಧತಂತ್ರದ ಭಾಗ' ಎಂದಿದ್ದಾರೆ. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವಿರುವುದುದಾಗಿ ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದೆ.
ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶಗಳು ಅಥವಾ ಇಲ್ಲಿನ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಅದನ್ನು ಗಮನಿಸದೆ ಬಿಡಲೂ ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರಕ್ಕೆ ಋಣಿಯಾಗಿದ್ದೇವೆ. ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನ ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ. ಪುಲ್ವಾಮಾದಲ್ಲಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ಈಗಲೂ ನಮ್ಮ ಕಾರ್ಯಾಚರಣೆ ಮತ್ತು ಕಾರ್ಯತಂತ್ರವನ್ನು ಪ್ರದರ್ಶಿಸಿದ್ದೇವೆ. ಇದನ್ನ ಅವರು ಕೂಡ ಗಮನಿಸಿರುತ್ತಾರೆ ಅಂತ ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.