ಸೌದಿ ಅರೇಬಿಯಾ,ಜೂ19(DaijiworldNews/AZM):ಸೌದಿ ಅರೇಬಿಯಾದ ಹಿರಿಯ ಪತ್ರಕರ್ತನ ಕೊಲೆಯ ಹಿಂದೆ ಸೌದಿ ಯುವರಾಜನ ಕೈವಾಡವಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ. ಹಾಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ವಿಶ್ವಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಮಾಲ್ ಕಶೋಗ್ಜಿ
ಪತ್ರಕರ್ತ 59 ವರ್ಷದ ಜಮಾಲ್ ಕಶೋಗ್ಜಿ ಅವರ ಕಗ್ಗೊಲೆಯ ಹಿಂದೆ ಸೌದಿಯ ಯುವರಾಜ ಸಲ್ಮಾನ್ ಅವರ ಕೈವಾಡವಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಆರೋಪಿಸಿದ್ದಾರೆ. ಇಸ್ತಾನ್ ಬುಲ್ ನಲ್ಲಿರುವ ಸೌದಿ ಅರೇಬಿಯಾದ ಕನ್ಸುಲೇಟ್ ಕಚೇರಿಗೆ 2018ರ ಅಕ್ಟೋಬರ್ 2ರಂದು ತೆರಳಿದ್ದಾಗ, ಜಮಾಲ್ ಖಶೋಗ್ಗಿ ಮೇಲೆ ಹಲ್ಲೆ ಮಾಡಲಾಗಿತ್ತು. ಜಮಾಲ್ ಅವರ ದೇಹವನ್ನು ತುಂಡುತುಂಡು ಮಾಡಿ, ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆಯಲಾಗಿತ್ತು. ಅವರ ಹತ್ಯೆಯನ್ನು ಸೌದಿ ನಿರಾಕರಿಸಿದ್ದರೂ ನಂತರ ಒಪ್ಪಿಕೊಂಡಿತ್ತು.
ಈ ಪ್ರಕರಣದ ತನಿಖೆಗೆಂದು ವಿಶ್ವಸಂಸ್ಥೆಯಿಂದ ವಿಶೇಷವಾಗಿ ನೇಮಕವಾಗಿದ್ದ ಆಗ್ನೇಸ್ ಕಲ್ಲಾಮರ್ಡ್ ಎಂಬ ಮಹಿಳಾಧಿಕಾರಿ 100 ಪುಟಗಳ ವರದಿ ಸಲ್ಲಿಸಿದ್ದು, ಖಶೋಗ್ಗಿ ಅವರನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಹತ್ಯೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯಡಿಯಲ್ಲಿ ಸೌದಿ ಅರೇಬಿಯಾ ಈ ಕಗ್ಗೊಲೆಗೆ ಜವಾಬ್ದಾರಿಯಾಗಿದೆ ಎಂದು ಅವರು ವರದಿ ಸಲ್ಲಿಸಿದ್ದಾರೆ.