ವಾಷಿಂಗ್ಟನ್ , ಜೂ. 27(DaijiworldNews/AK) : ಇತ್ತೀಚೆಗೆ ಚೀನಾದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ನಂತರ, ಭಾರತದೊಂದಿಗೆ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಕಳೆದ 4 ದಿನಗಳಿಂದ ವ್ಯಾಪಾರ ಒಪ್ಪಂದ ಸಂಬಂಧ ಸುದೀರ್ಘ ಮಾತುಕತೆ ನಡೆಯುತ್ತಿದೆ. ಈ ಮಾತುಕತೆಯ ಸಮಯದಲ್ಲೇ ಟ್ರಂಪ್ ಅವರು ಶ್ವೇತ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಜೊತೆಗಿನ ಒಪ್ಪಂದ ಬಗ್ಗೆ ಮಾತನಾಡಿದರು.
ಮೆಗಾ ವ್ಯಾಪಾರ ಒಪ್ಪಂದದ ಕುರಿತು ನಾಲ್ಕು ದಿನಗಳ ಮಾತುಕತೆ ವೇಳೆ ಎರಡೂ ದೇಶಗಳಲ್ಲಿ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ, ಸುಂಕ ಕಡಿತ ಮತ್ತು ಸುಂಕ ರಹಿತ ವ್ಯಾಪಾರದ ಬಗ್ಗೆ ಚರ್ಚೆ ನಡೆಸಲಾಗಿದೆ.
ಮಾತುಕತೆ ವೇಳೆ ಎರಡು ದೇಶಗಳ ನಡುವೆ ಪ್ರಸ್ತುತ ಇರುವ 190 ಬಿಲಿಯನ್ ಡಾಲರ್ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು2030 ರ ವೇಳೆಗೆ 500 ಬಿಲಿಯನ್ ಡಾಲರ್ಗೆ ಕೊಂಡೊಯ್ಯುವ ಗುರಿಯನ್ನು ಹಾಕಲಾಗಿದೆ.
ಚೀನಾದ ಜೊತೆ ಅಮೆರಿಕದ ವ್ಯಾಪಾರ ಒಪ್ಪಂದದ ವಿವರ ಲಭ್ಯವಾಗದೇ ಇದ್ದರೂ ಅಪರೂಪದ ಭೂ ಖನಿಜ ರಫ್ತನ್ನು ತ್ವರಿತಗೊಳಿಸಲು ಈ ಒಪ್ಪಂದ ಗಮನಹರಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.