ಕುನ್ಮಿಂಗ್, ಜೂ. 30 (DaijiworldNews/AA): ಚೀನಾದ ಕುನ್ಮಿಂಗ್ನಲ್ಲಿ ಚೀನಾ-ದಕ್ಷಿಣ ಏಷ್ಯಾ ಎಕ್ಸ್ಪೋ ಮತ್ತು ಚೀನಾ-ದಕ್ಷಿಣ ಏಷ್ಯಾ ಸಹಕಾರ ಸಮ್ಮೇಳನ ಇತ್ತೀಚೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ತ್ರಿಪಕ್ಷೀಯ ಸಭೆ ನಡೆದಿದೆ. ಸಭೆಯಲ್ಲಿ ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಷನ್ ಬದಲಿಗೆ ಹೊಸ ಒಕ್ಕೂಟ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಾರ್ಕ್, ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳನ್ನು ಒಳಗೊಂಡಿರುವ ಪ್ರಾದೇಶಿಕ ಸಂಘಟನೆಯಾಗಿದೆ. ಇದು ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನವನ್ನು ಒಳಗೊಂಡಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ-ರಾಜಕೀಯ ಘರ್ಷಣೆಯಿಂದಾಗಿ, 2016ರಿಂದ ಸಾರ್ಕ್ನ ಶೃಂಗಸಭೆಗಳು ಸ್ಥಗಿತಗೊಂಡಿವೆ.
ಪ್ರಾದೇಶಿಕ ಏಕೀಕರಣ ಮತ್ತು ಸಂಪರ್ಕಕ್ಕಾಗಿ ಹೊಸ ಸಂಘಟನೆಯ ಅಗತ್ಯವಿದೆ ಎಂದು ಪಾಕಿಸ್ತಾನ ಮತ್ತು ಚೀನಾ ಎರಡೂ ಸಭೆಯಲ್ಲಿ ಮನವರಿಕೆ ಮಾಡಿವೆ. ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಸಾರ್ಕ್ ಸದಸ್ಯರು ಹೊಸ ಗುಂಪಿನ ಭಾಗವಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿಯ ಬಳಿಕ ಭಾರತವು ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ 19ನೇ ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿತು. ಭಾರತಕ್ಕೆ ಬಾಂಗ್ಲಾದೇಶ, ಭೂತಾನ್, ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ಸಹ ಸಾಥ್ ನೀಡಿದ್ದವು. ಇದರಿಂದಾಗಿ ಶೃಂಗಸಭೆಯನ್ನು ರದ್ದುಗೊಳಿಸಲಾಯಿತು. ಈ ಹಿನ್ನೆಲೆ ಸಾರ್ಕ್ನ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಇದರ ಬೆನ್ನಲೆ ಕುನ್ಮಿಂಗ್ನಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ನೇತೃತ್ವದಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಆಫ್ಘಾನಿಸ್ತಾನವನ್ನು ಒಳಗೊಂಡಂತೆ ಹೊಸ ಪ್ರಾದೇಶಿಕ ಒಕ್ಕೂಟವನ್ನು ರಚಿಸುವ ಮೂರು ದೇಶಗಳು ಸಮಾಲೋಚನೆ ನಡೆಸಿವೆ ಎಂದು ಹೇಳಲಾಗುತ್ತಿದೆ.
ಈ ಒಕ್ಕೂಟವು ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಭಾರತವನ್ನು ಕೂಡ ಈ ಒಕ್ಕೂಟಕ್ಕೆ ಆಹ್ವಾನಿಸಲಾಗುವ ಸಾಧ್ಯತೆಯಿದೆ. ಆದರೆ ಭಾರತದ ಭಾಗವಹಿಸುವಿಕೆಯು ಅನಿಶ್ಚಿತವಾಗಿದೆ.