ವಾಷಿಂಗ್ಟನ್, ಜು. 02 (DaijiworldNews/AA): ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಕದನ ವಿರಾಮ ಒಪ್ಪಂದವನ್ನು ತಿರಸ್ಕರಿಸುವುದರ ವಿರುದ್ಧ ಟ್ರಂಪ್, ಹಮಾಸ್ಗೆ ಎಚ್ಚರಿಕೆ ನೀಡಿದ್ದಾರೆ. "ಯುದ್ಧ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆಯೇ ಹೊರತು ತಹಬದಿಗೆ ಬರುವುದಿಲ್ಲ. ಶಾಂತಿ ಸ್ಥಾಪಿಸಲು ಬಹಳ ಶ್ರಮಿಸಿರುವ ಕತಾರ್ ಮತ್ತು ಈಜಿಪ್ಟ್ ಅಂತಿಮ ರೂಪುರೇಷೆ ನೀಡಲಿವೆ. ಪ್ರಸ್ತಾವಿತ ಕದನ ವಿರಾಮ ಅವಧಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳು ಮುಂದುವರಿಯುತ್ತವೆ" ಎಂದಿದ್ದಾರೆ.
"ನನ್ನ ಪ್ರತಿನಿಧಿಗಳು ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಜೊತೆ ದೀರ್ಘ ಮತ್ತು ಆಶಾದಾಯಕ ಮಾತುಕತೆ ನಡೆಸಿದರು. 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ. ಈ ಸಮಯದಲ್ಲಿ ನಾವು ಯುದ್ಧವನ್ನು ಕೊನೆಗೊಳಿಸಲು ಎಲ್ಲ ದೇಶಗಳೊಂದಿಗೆ ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.
"ಶಾಂತಿಯನ್ನು ತರಲು ಬಹಳ ಶ್ರಮಿಸಿದ ಕತಾರ್ ಮತ್ತು ಈಜಿಫ್ಟ್ ಅಂತಿಮ ಪ್ರಸ್ತಾಪವನ್ನು ನೀಡುತ್ತವೆ. ಪಶ್ಚಿಮ ಏಷ್ಯಾದ ಒಳಿತಿಗಾಗಿ, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಇದು ಹೀಗೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ" ಎಂದು ಅಭಿಪ್ರಾಯಪಟ್ಟರು.