ಬರ್ಲಿನ್, ಜು. 28 (DaijiworldNews/AA): ದಕ್ಷಿಣ ಜರ್ಮನಿಯಲ್ಲಿ ಪ್ರಯಾಣಿಕ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಹಿನ್ನೆಲೆ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮ್ಯೂನಿಚ್ನಿಂದ 158 ಕಿಲೋಮೀಟರ್ ದೂರದಲ್ಲಿರುವ ರೀಡ್ಲಿಂಗೆನ್ ಬಳಿ ಈ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ಹಳಿ ತಪ್ಪಿರುವ ಬೋಗಿಗಳಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ.
"ಘಟನೆ ನಡೆದ ಸ್ಥಳದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರೈಲು ಹಳಿ ತಪ್ಪಿರುವ ಸಾಧ್ಯತೆ ಇದೆ. ಆದಾಗ್ಯೂ, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ" ಎಂದು ಬಾಡೆನ್ ವುರ್ಟೆನ್ಬರ್ಗ್ನ ಸಚಿವ ಥಾಮಸ್ ಸ್ಟೋಬಲ್ ತಿಳಿಸಿದ್ದಾರೆ.