ಇಟಲಿ, ಆ. 13 (DaijiworldNews/AA): ಇತ್ತೀಚೆಗಿನ ದಿನಗಳಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮದುವೆ ಆದ ಕೆಲವೇ ವರ್ಷಗಳಲ್ಲಿ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ, ಹೀಗೆ ಇನ್ನಿತರ ಕಾರಣಗಳಿಂದಾಗಿ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಆದರೆ 70 ವರ್ಷಕ್ಕೂ ಅಧಿಕ ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ, ಇದೀಗ ತಮ್ಮ ಇಳಿವಯಸ್ಸಿನಲ್ಲಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

70 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ನಡೆಸಿದ ಆಂಟೋನಿಯೋ ಸಿ ಹಾಗೂ ಅವರ ಪತ್ನಿ ರೋಸಾ ಸಿ ಅವರಿಗೆ ಐದು ಜನ ಮಕ್ಕಳು. ಹನ್ನೆರಡು ಜನ ಮೊಮ್ಮಕ್ಕಳು. ಒಬ್ಬ ಮರಿ ಮೊಮ್ಮಗ. ಇದೀಗ ಆಂಟೋನಿಯೋ ಅವರು ತಮ್ಮ ಪತ್ನಿಗೆ ಆ ಒಂದು ಕಾರಣಕ್ಕೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.
ಇಟಲಿಯ ಸಾರ್ಡಿನಿಯಾದವರಾದ ಆಂಟೋನಿಯೊ ಸಿ ಅವರು 1930 ರ ದಶಕದಲ್ಲಿ ಪತ್ನಿ ರೋಸಾ ಸಿ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ನೇಪಲ್ಸ್ನಲ್ಲಿ ಇಟಾಲಿಯನ್ ಕ್ಯಾರಬಿನಿಯರಿಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾಗ ವೇಳೆಯಲ್ಲಿ ಇವರಿಬ್ಬರ ಭೇಟಿಯಾಯಿತು. ಆ ಬಳಿಕ ಇಬ್ಬರೂ ವಿವಾಹವಾದರು. 99 ವರ್ಷದ ಆಂಟೋನಿಯೊ ಸಿ ಅವರು ತನ್ನ 96 ವರ್ಷದ ಪತ್ನಿ ರೋಸಾ ಸಿ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇನ್ನು ವಿಚ್ಛೇದನಕ್ಕೆ ಕಾರಣ ವೃದ್ಧೆ ಮಾಡಿದ್ದ ಆ ಒಂದು ತಪ್ಪು. ಆಕೆ ಮಾಡಿದ ಆ ಒಂದು ತಪ್ಪನ್ನು ಕ್ಷಮಿಸಲು ಸಾಧ್ಯವಿಲ್ಲದೇ ವಿಚ್ಛೇದನ ಪಡೆಯಲು ಆಂಟೋನಿಯೊ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನ ಪತ್ನಿ ಅರವತ್ತು ವರ್ಷಗಳ ಹಿಂದೆಯೇ ತನಗೆ ವಂಚಿಸಿದ್ದಾಳೆ ಎನ್ನುವುದು ಈ ವೃದ್ಧನಿಗೆ ತಿಳಿದಿದ್ದು, ಈ ಹಿನ್ನಲೆಯಲ್ಲಿ ಡಿವೋರ್ಸ್ ನೀಡಲು ಕೋರ್ಟ್ ಮೊರೆಹೋಗಿದ್ದರಂತೆ. ಈ ವೃದ್ಧನು ಕ್ರಿಸ್ಮಸ್ಗೆ ಕೆಲವೇ ಕೆಲವು ದಿನ ಇರುವಾಗಲೇ ತನ್ನ ಹಳೆಯ ಡ್ರಾಯರ್ಗಳ ಪೆಟ್ಟಿಗೆಯಲ್ಲಿ ಏನನ್ನೋ ಹುಡುಕುತ್ತಿದ್ದ ವೇಳೆ ಪತ್ರವೊಂದು ಕೈಗೆ ಸಿಕ್ಕಿತು. ತನ್ನ ಪತ್ನಿಗೆ ಮಾಜಿ ಪ್ರೇಮಿಯ ಬರೆದಿದ್ದ ಪತ್ರವಿದು. ಈ ಬಗ್ಗೆ ತನ್ನ ಮಡದಿಯನ್ನು ಕೇಳಿದಾಗ, ತನಗೆ ಮದುವೆಗೂ ಮುನ್ನ ಲವ್ ಇತ್ತು ಎಂದು ಒಪ್ಪಿಕೊಂಡಿದ್ದು, ಇದುವೇ ವೃದ್ಧನ ಕೋಪಕ್ಕೆ ಕಾರಣವಾಗಿತ್ತು. ತನ್ನ ತಪ್ಪನ್ನು ಒಪ್ಪಿಕೊಂಡು ತನ್ನ ಪತಿಯ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಆಂಟೋನಿಯೊ ವಿಚ್ಛೇದನ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಘಟನೆಯೂ ನಡೆದು ವರ್ಷಗಳೇ ಉರುಳಿದೆ. ಆದರೆ ಇದೀಗ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ನೆಟ್ಟಿಗರು 'ವೃದ್ಧನ ಈ ನಿರ್ಧಾರ ಸರಿಯಲ್ಲ', 'ನಿಮ್ಮ ಪತ್ನಿಗೆ ಮೋಸ ಮಾಡುವ ಮನಸ್ಸಿದರೆ ಮದುವೆಯಾದ ಪ್ರಾರಂಭದಲ್ಲಿ ತನ್ನ ಪ್ರೇಮಿಯ ಜೊತೆಗೆ ಅನೈತಿಕ ಸಂಬಂಧ ಹೊಂದಬಹುದಿತ್ತು. ನಿಮ್ಮ ಈ ನಿರ್ಧಾರ ಸರಿಯಲ್ಲ', 'ಕಾಡು ಬಾ ಎನ್ನುತ್ತೆ ಊರು ಹೋಗು ಎನ್ನುವ ವಯಸ್ಸಿನಲ್ಲಿ ಈ ನಿರ್ಧಾರ ಬೇಕೆ?', 'ವಯಸ್ಸಿನಲ್ಲಿ ಈ ರೀತಿ ಕಿರಿಕಿರಿ ಬೇಕಾ?' ಎಂದು ಕಮೆಂಟ್ ಮಾಡಿದ್ದಾರೆ.