ಇಸ್ಲಾಮಾಬಾದ್, ಆ. 17 (DaijiworldNews/AA): ಪಾಕಿಸ್ತಾನದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 142 ಮಕ್ಕಳು ಸೇರಿದಂತೆ 325ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾರಿ ಮಳೆಯಿಂದಾಗಿ ಪ್ರವಾಹ, ಭೂಕುಸಿತಗಳು ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಇದರಿಂದಾಗಿ ಜನನಿಬಿಡ ಪ್ರದೇಶಗಳಲ್ಲಿ ಅಸ್ತವ್ಯಸ್ಥ ಆಗಿದ್ದು, ಜನರು, ಪ್ರಾಣಿಗಳು ತತ್ತರಿಸಿವೆ. ಹೆಚ್ಚಿನ ಸಾವುಗಳು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಂಭವಿಸಿವೆ. ಭಾರಿ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಹೀಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಕರಾಕೋರಂ ಹೆದ್ದಾರಿ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳು ಬಂದ್ ಆಗಿವೆ ಎಂದು ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ ಖೈಬರ್ ಪಖ್ತುಂಖ್ವಾದಲ್ಲಿ ಪ್ರವಾಹದಿಂದ ಕನಿಷ್ಠ 198 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 14 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಬುನೇರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 92 ಸಾವುಗಳು ಸಂಭವಿಸಿವೆ. ಮಾನ್ಸೆಹ್ರಾ, ಬಾಜೌರ್, ಬಟಾಗ್ರಾಮ್, ಲೋವರ್ ದಿರ್ ಮತ್ತು ಶಾಂಗ್ಲಾ ಜಿಲ್ಲೆಗಳಲ್ಲೂ ಪ್ರವಾಹ ಉಂಟಾಗಿದೆ ಎಂದು ಪ್ರಾಂತ್ಯೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಪಿಡಿಎಂಎ) ವಕ್ತಾರರು ತಿಳಿಸಿದ್ದಾರೆ.
ಮಳೆಯಿಂದಾಗಿ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯಿತು, ರಸ್ತೆಗಳು ಮತ್ತು ಮನೆಗಳಿಗೆ ನೀರು ನುಗ್ಗಿತು, ಮರಗಳು ಉರುಳಿಬಿದ್ದಿದ್ದವು. ಧಾರಾಕಾರ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿದವು, ರಸ್ತೆಗಳು ಕೊಚ್ಚಿಹೋಗಿವೆ ಮತ್ತು ಹಲವಾರು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಬೀದಿಗಳು ಜಲಮಾರ್ಗಗಳಾಗಿ ಮಾರ್ಪಟ್ಟಿದ್ದು, ಕಾರುಗಳು ನೀರಿನಲ್ಲಿ ತೇಲುತ್ತಿದೆ. ಇನ್ನು ಈ ಅವ್ಯವಸ್ಥೆಯ ನಡುವೆ ಪರಿಹಾರ ಕಾರ್ಯಾಚರಣೆ ನಡೆಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ.
ಮೃತರು ಮತ್ತು ಗಾಯಗೊಂಡವರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದ. ಆಗಸ್ಟ್ 21 ರವರೆಗೆ ಪ್ರಾಂತ್ಯದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿ ಅಮೀನ್ ಅಲಿ ಗಂಡಾಪುರ್ ಅವರ ನಿರ್ದೇಶನದಂತೆ ಪ್ರವಾಹದಿಂದ ಹೆಚ್ಚು ಬಾಧಿತವಾದ ಜಿಲ್ಲೆಗಳಿಗೆ ಒಟ್ಟು 500 ಮಿಲಿಯನ್ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರವಾಹ, ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾದ ಜನರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದ್ದ ಪ್ರಾಂತ್ಯ ಸರ್ಕಾರದ ಎರಡು ಹೆಲಿಕಾಪ್ಟರ್ಗಳಲ್ಲಿ ಒಂದು ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡಿದೆ. ಪರಿಣಾಮ ಮೊಹಮ್ಮದ್ ಬುಡಕಟ್ಟು ಜಿಲ್ಲೆಯಲ್ಲಿ ಇಬ್ಬರು ಸಿಬ್ಬಂದಿ ಮತ್ತು ಮೂವರು ರಕ್ಷಣಾ ಕಾರ್ಯಕರ್ತರು ಮೃತಪಟ್ಟಿದ್ದಾರೆ.