ಟೊಕಿಯೋ, ಜೂ27(Daijiworld News/SS): ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಜಪಾನ್ಗೆ ತೆರಳಿದ್ದಾರೆ. ಸದ್ಯ ಮೋದಿ ಅವರು ಜಪಾನ್ ಪ್ರವಾಸದಲ್ಲಿದ್ದು, ಒಸಾಕಾದ ವಿಮಾನ ನಿಲ್ದಾಣದಲ್ಲಿ ಇಳಿದ ಅವರಿಗೆ ಭವ್ಯ ಸ್ವಾಗತ ದೊರೆತಿದೆ.
ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಪ್ರಮುಖ ವಿಶ್ವನಾಯಕರೊಂದಿಗೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಜಪಾನ್ಗೆ ಹೊರಡುವ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೋದಿ, ಮಹಿಳೆಯರ ಸ್ವಾವಲಂಬನೆ, ಕೃತಕ ಬುದ್ಧಿಮತ್ತೆ ಮತ್ತು ಜಗತ್ತನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆಗಳಾದ ಭಯೋತ್ಪಾದನೆಯಂಥ ವಿಷಯಗಳ ಬಗ್ಗೆ ಚರ್ಚಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದರು.
ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ವಿಶ್ವದಲ್ಲಿ ಸ್ಥಿರತೆ ಕಾಪಾಡಲು ಚರ್ಚೆಗಳು ಅಗತ್ಯ. ಜಿ20 ಸಮಾವೇಶ ಇಂಥ ಚರ್ಚೆಗಳಿಗೆ ಸೂಕ್ತ ವೇದಿಕೆ. 2022ರಲ್ಲಿ ಜಿ20 ಸಮಾವೇಶವು ಭಾರತದಲ್ಲಿ ನಡೆಯಲಿದೆ. ಆಗ ಭಾರತದ 75ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದ ಜೊತೆಗೆ ನಮ್ಮ ಪ್ರಗತಿಯ ಕಥನವನ್ನು ಹೇಳಿಕೊಳ್ಳಲಿದ್ದೇವೆ. ಇದೀಗ ಒಸಾಕ ನಗರದಲ್ಲಿ ನಡೆಯುತ್ತಿರುವ ಸಮಾವೇಶವು ದೆಹಲಿ ಸಮಾವೇಶಕ್ಕೆ ಅಡಿಗಲ್ಲು ಎಂದು ಹೇಳಿದ್ದಾರೆ.
ಒಸಾಕಾದ ಹೊಟೇಲ್ಗೆ ತೆರಳಿದ ಪ್ರಧಾನಿ ಮೋದಿ ಅವರನ್ನು ಭಾರತೀಯ ಮೂಲದವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.