ಕಾಬೂಲ್, ಸೆ. 01 (DaijiworldNews/AA): ಅಫ್ಘಾನಿಸ್ತಾನದ ಆಗ್ನೇಯ ಭಾಗದಲ್ಲಿ ಸೋಮವಾರ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದಲ್ಲಿ ಕನಿಷ್ಠ 622 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಭೂಕಂಪದಿಂದಾಗಿ ಕನಿಷ್ಠ 622 ಜನರು ಮೃತಪಟ್ಟಿದ್ದು, 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ವರದಿ ಪ್ರಕಾರ, ಸ್ಥಳೀಯ ಸಮಯ ರಾತ್ರಿ 11:47 ಕ್ಕೆ 8 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಿಂದ ಪೂರ್ವ-ಈಶಾನ್ಯಕ್ಕೆ 27 ಕಿ.ಮೀ ದೂರದಲ್ಲಿದೆ.
ಭೂಕಂಪದ ಸಮಯದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಕ್ಕಳು ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹಲವಾರು ಮಕ್ಕಳು ಗಾಯಗೊಂಡಿದ್ದಾರೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಕೆಲವು ಸೆಕೆಂಡುಗಳ ಕಾಲ ಕಟ್ಟಡಗಳು ಕಂಪಿಸಿವೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಸುಮಾರು 370 ಕಿ.ಮೀ ದೂರದಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ.
ದೆಹಲಿ-ಎನ್ಸಿಆರ್ ಸೇರಿದಂತೆ ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಕಟ್ಟಡಗಳು ಕಂಪಿಸಿದ್ದು, ಜನರು ಹೊರಗೆ ಓಡಿ ಬಂದಿದ್ದಾರೆ. ಭಾರತದಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.