ಒಸಾಕಾ, ಜೂ28(Daijiworld News/SS): ಭಯೋತ್ಪಾದನೆಯು ಮಾನವೀಯತೆಗೆ ದೊಡ್ಡ ಅಪಾಯ. ಅದು ಆರ್ಥಿಕ ಅಭಿವೃದ್ಧಿ ಮತ್ತು ಕೋಮುಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಪಾನಿನ ಒಸಾಕಾದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ನರೇಂದ್ರ ಮೋದಿ, ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು. ಭಯೋತ್ಪಾದನಾ ಕೃತ್ಯಗಳು ಅಮಾಯಕರ ಜೀವವನ್ನು ಬಲಿ ಪಡೆಯುತ್ತದೆ ಎಂಬುದು ನಿಜ. ಆದರೆ, ಇದರಿಂದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಸ್ಥಿರತೆ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಇದೇ ವೇಳೆ, ಭಯೋತ್ಪಾದನೆ ಮತ್ತು ಜಾತಿವಾದಕ್ಕೆ ಕುಮ್ಮಕ್ಕು ನೀಡುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಈ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ಭಾರತ ಮತ್ತು ಅಮೆರಿಕ ದೇಶಗಳು ಹಿಂದೆಂದೂ ಇಲ್ಲದಷ್ಟು ಆತ್ಮೀಯವಾಗಿವೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಪರಸ್ಪರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ. ಜೊತೆಗೆ, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಗೆಲುವಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದ್ದಾರೆ.
ನೀವು ಈ ಗೆಲುವಿಗೆ ಅರ್ಹರು. ನನಗೆ ಗೊತ್ತು, ನೀವು ಮೊದಲು ಅಧಿಕಾರಕ್ಕೆ ಬಂದಾಗ ಎಷ್ಟೊಂದು ಇನ್ನಾಭಿಪ್ರಾಯಗಳಿದ್ದವು. ಆದರೆ ಅವನ್ನೆಲ್ಲ ಸರಿದೂಗಿಸಿಕೊಂಡು ಆಡಳಿತ ನಡೆಸಿದ್ದೀರಿ. ಇದು ನಮ್ಮ ಸಾಮರ್ಥ್ಯ.. ನಿಮ್ಮ ಸಾಮರ್ಥ್ಯಕ್ಕೆ ಮತ್ತು ನಿಮಗೆ ನನ್ನ ಅಭಿನಂದನೆ" ಎಂದು ತುಂಬು ಮನಸ್ಸಿನಿಂದ ಟ್ರಂಪ್ ಮೋದಿಯನ್ನು ಶ್ಲಾಘಿಸಿದ್ದಾರೆ.