ಕ್ಯಾಲಿಫೋರ್ನಿ, ಅ. 07 (DaijiworldNews/TA): ನಗರದ ಸ್ಯಾಕ್ರಮೆಂಟೋದಲ್ಲಿ ಸೋಮವಾರ ಸಂಜೆ ವೈದ್ಯಕೀಯ ಹೆಲಿಕಾಪ್ಟರ್ ಜನನಿಬಿಡ ಹೆದ್ದಾರಿಗೆ ಅಪ್ಪಳಿಸಿ ಅಪಘಾತಕ್ಕೀಡಾಗಿದ್ದು, ಕನಿಷ್ಠ ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾಕ್ರಮೆಂಟೊ ಅಗ್ನಿಶಾಮಕ ಇಲಾಖೆ ದೃಢಪಡಿಸಿದಂತೆ, ಹೋವೆ ಅವೆನ್ಯೂ ಬಳಿಯ ಪೂರ್ವಕ್ಕೆ ಹೋಗುವ ಹೆದ್ದಾರಿ 50 ರಲ್ಲಿ ಸಂಜೆ 7:10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. REACH ವಾಯು ವೈದ್ಯಕೀಯ ಸೇವಾ ಚಾಪರ್ ಎಂದು ಗುರುತಿಸಲಾದ ಹೆಲಿಕಾಪ್ಟರ್ ಪತನಗೊಂಡಿದೆ. ಸ್ಯಾಕ್ರಮೆಂಟೊ ಅಗ್ನಿಶಾಮಕ ದಳ, ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿವೆ. ಅಪಘಾತದ ನಂತರ ಹಲವಾರು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ಸ್ಥಳವನ್ನು ಮುಂಜಾಗೃತಾ ಕ್ರಮವಾಗಿ 59 ನೇ ಬೀದಿಯ ಬಳಿ ಪೂರ್ವಕ್ಕೆ ಹೋಗುವ ಹೆದ್ದಾರಿ 50 ರ ಎಲ್ಲಾ ಲೇನ್ಗಳನ್ನು ಮುಚ್ಚಲಾಯಿತು. ಸುರಕ್ಷತೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಸ್ಯಾಕ್ರಮೆಂಟೊ ಮೇಯರ್ ಕೆವಿನ್ ಮೆಕಾರ್ಟಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಇದನ್ನು "ಭಯಾನಕ ಹೆಲಿಕಾಪ್ಟರ್ ಅಪಘಾತ" ಎಂದು ಅವರು ಕರೆದರು. "ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಮೇಯರ್ ಹೇಳಿದರು.
ಅಪಘಾತದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಗಾಯಗೊಂಡವರ ಗುರುತುಗಳು ಅಥವಾ ವಿಮಾನದಲ್ಲಿದ್ದ ಪ್ರಯಾಣಿಕರ ನಿಖರವಾದ ಸಂಖ್ಯೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ.