ಇಸ್ಲಾಮಾಬಾದ್, ನ. 21 (DaijiworldNews/AA): ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ, 15 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಮಲಿಕ್ಪುರದಲ್ಲಿ ನಡೆದಿದೆ.

ಸ್ಫೋಟದಿಂದಾಗಿ ಕಾರ್ಖಾನೆಯ ಒಂದು ಬದಿಯ ಕಟ್ಟಡ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಫೈಸಲಾಬಾದ್ ಉಪ ಆಯುಕ್ತ ರಾಜಾ ಜಹಾಂಗೀರ್ ಅನ್ವರ್ ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡಗಳು ಅವಶೇಷಗಳಿಂದ 15 ಮೃತ ದೇಹಗಳನ್ನು ಹೊರತೆಗೆದಿವೆ ಮತ್ತು ಏಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳನ್ನು ತೆರವುಗೊಳಿಸುವಲ್ಲಿ ನಿರತವಾಗಿವೆ. ಇಡೀ ಜಿಲ್ಲಾ ಯಂತ್ರೋಪಕರಣಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ
ಅಗ್ನಿಶಾಮಕ ದಳ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಸೇರಿದಂತೆ ಎಲ್ಲಾ ತುರ್ತು ಪ್ರತಿಕ್ರಿಯೆ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಯ್ಲರ್ ಸ್ಫೋಟದ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಪ್ರದೇಶದ ಇತರ ರಾಸಾಯನಿಕ ಕಾರ್ಖಾನೆಗಳ ಸುರಕ್ಷತಾ ತಪಾಸಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.