ಅಬುಧಾಬಿ, ನ. 21 (DaijiworldNews/AA): ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಭಾರತೀಯ ತೇಜಸ್ ಯುದ್ಧ ವಿಮಾನ ಪತನವಾಗಿ ಪೈಲಟ್ ಮೃತಪಟ್ಟ ಘಟನೆ ನಡೆದಿದೆ.

"ಇಂದು ದುಬೈ ಏರ್ ಶೋನಲ್ಲಿ ನಡೆದ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಐಎಎಫ್ ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಪೈಲಟ್ನ ಸಾವಿಗೆ ಐಎಎಫ್ತೀವ್ರವಾಗಿ ವಿಷಾದಿಸುತ್ತದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ" ಎಂದು ಭಾರತೀಯ ವಾಯುಪಡೆ(ಐಎಎಫ್) ಪೋಸ್ಟ್ ಮಾಡಿದೆ.
ಬೆಂಗಳೂರಿನ ಹೆಚ್ಎಎಲ್ ನಿರ್ಮಿತ ಲಘು ಯುದ್ಧ ವಿಮಾನವು ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗ ಆಕಾಶದಲ್ಲೇ ಪಲ್ಟಿಯಾಗಿ, ನಂತರ ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಸದ್ಯ ತೇಜಸ್ ಯುದ್ಧವಿಮಾನ ಪತನಗೊಂಡಿರುವ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಾಯುನೆಲೆಯ ಪರಿಧಿಯ ಬಳಿಯ ಅಪಘಾತದ ಪ್ರದೇಶದಿಂದ ಭಾರೀ ಹೊಗೆ ಮತ್ತು ಬೆಂಕಿ ಹೆಚ್ಚಾಗುತ್ತಿದ್ದಂತೆ ತುರ್ತು ಸಹಾಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಘಟನೆ ವೇಳೆ ಪೈಲಟ್ ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.