ಇಸ್ಲಮಾಬಾದ್, ಜು09(Daijiworld News/SS): ಜುಲೈ 21ರಿಂದ ಮೂರು ದಿನಗಳ ಕಾಲ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅವರು ಐಷಾರಾಮಿ ಹೋಟೆಲ್ ಬದಲಾಗಿ ಅಮೆರಿಕದಲ್ಲಿರುವ ಪಾಕ್ ರಾಯಭಾರಿಯ ನಿವಾಸದಲ್ಲಿ ತಂಗುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾಕ್ ರಾಯಭಾರಿ ಅಸಾದ್ ಮಝೀದ್ ಖಾನ್ ಅವರ ಮನೆಯಲ್ಲಿಯೇ ತಂಗಿದರೆ ಪ್ರವಾಸದ ಖರ್ಚು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಷ್ಟ್ರದ ಆರ್ಥಿಕ ಮುಗ್ಗಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಇಮ್ರಾನ್ ತೆಗೆದುಕೊಂಡಿದ್ದರು. ಕಳೆದ ವಾರ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕಾರ್ಯನಿರ್ವಹಣಾ ಮಂಡಳಿ ಪಾಕಿಸ್ತಾನಕ್ಕೆ 6 ಬಿಲಿಯನ್ ಯುಎಸ್ ಡಾಲರ್ ನೆರವು ನೀಡಲು ಒಪ್ಪಿಗೆ ನೀಡಿತ್ತು. ಈ ಮೂಲಕ ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ದೊರಕಿತ್ತು. ನೆರವು ನೀಡುವ ಸಂದರ್ಭದಲ್ಲಿ ಕಠಿಣ ಷರತ್ತುಗಳನ್ನು ವಿಧಿಸಿದ್ದ ಐಎಂಎಫ್, ವೆಚ್ಚ ತಗ್ಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.
ಪಾಕಿಸ್ತಾನದ ಆರ್ಥಿಕ ಸಂಕಷ್ಟ ಪ್ರಧಾನಿ ಇಮ್ರಾನ್ ಖಾನ್ಗೂ ತಟ್ಟಿದ್ದು, ಜುಲೈ 21ರಿಂದ ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಇಮ್ರಾನ್, ಪ್ರವಾಸದ ವೆಚ್ಚ ತಗ್ಗಿಸಲು ಮುಂದಾಗಿದ್ದಾರೆ.
ವಾಷಿಂಗ್ಟನ್ನಲ್ಲಿ ಭಾರತ, ಟರ್ಕಿ, ಜಪಾನ್, ಪಾಕಿಸ್ತಾನ ಸೇರಿ ಹಲವು ದೇಶಗಳ ರಾಯಭಾರಿಗಳ ನಿವಾಸಗಳು ಇವೆ. ಎಲ್ಲರ ಅಧಿಕೃತ ನಿವಾಸಗಳೂ ಅಲ್ಲೇ ಆಸುಪಾಸು ಪ್ರದೇಶಗಳಲ್ಲಿ ಇವೆ. ಅವು ತೀರ ದೊಡ್ಡದಾಗಿ ಏನೂ ಇರುವುದಿಲ್ಲ. ಹಾಗಾಗಿ ಇಮ್ರಾನ್ ಖಾನ್ ಒಂದೊಮ್ಮೆ ರಾಯಭಾರಿ ಮನೆಯಲ್ಲಿ ತಂಗಲು ತೀರ್ಮಾನಿಸಿದರೆ ಅಲ್ಲಿ ಸಭೆಗಳನ್ನು ನಡೆಸಲು ಸಾಧ್ಯವಿಲ್ಲ. ಅವರು ವಾಷಿಂಗ್ಟನ್ನ ಟ್ರಾಫಿಕ್ ಜಾಸ್ತಿ ಇರುವ ರಸ್ತೆಗಳಲ್ಲೇ ಸಂಚರಿಸಿ ಅಲ್ಲಿಗೆ ತಲುಪಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ.